ನ್ಯೂಸ್ ನಾಟೌಟ್:ಬಹು ನಿರೀಕ್ಷಿತ ಭವ್ಯ ರಾಮಮಂದಿರದ ಅದ್ದೂರಿ ಉದ್ಘಾಟನೆ ಸಮಾರಂಭಕ್ಕೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಮಮಂದಿರ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ವಂಚನೆಯ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
ದೇವಾಲಯದ ಹೆಸರಿನಲ್ಲಿ ಸೈಬರ್ ದಂದೆ ನಡೆಯುತ್ತಿದೆ ಎನ್ನಲಾಗಿದೆ. ದೇಣಿಗೆ ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ (ವಿಎಚ್ಪಿ) ಎಚ್ಚರಿಕೆ ನೀಡಿದೆ. ಈ ಸಂದೇಶಗಳಲ್ಲಿ ಕ್ಯೂಆರ್ ಕೋಡ್ ಕೂಡ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ಅದು ವಂಚಕರ ಖಾತೆಗೆ ಸೇರುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ವಿಎಚ್ಪಿ ವಕ್ತಾರ ವಿನೋಬ್ ಬನ್ಸಾಲ್ ಗೃಹ ಸಚಿವಾಲಯ ಮತ್ತು ಉತ್ತರ ಪ್ರದೇಶ ಹಾಗೂ ದಿಲ್ಲಿ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಂದಿರ ನಿರ್ಮಾಣವನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹೊರತಾಗಿ ದೇಣಿಗೆ ಸಂಗ್ರಹಿಸಲು ಯಾರಿಗೂ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
“ದೇವಸ್ಥಾನದ ಹೆಸರಿನಲ್ಲಿ ಹಣ ಸಂಗ್ರಹಿಸುವ ಕೊಳಕು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ನನಗೆ ಇತ್ತೀಚೆಗೆ ಮಾಹಿತಿ ಬಂದಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ್, ದೇಣಿಗೆ ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ. ನಾನು ಗೃಹ ಸಚಿವಾಲಯ, ಉತ್ತರ ಪ್ರದೇಶ ಡಿಜಿಪಿ ಮತ್ತು ದಿಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಜನರು ಅಂತಹ ವಂಚನೆಯ ಜಾಲದೊಳಗೆ ಬೀಳದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಜನರು ಕೂಡ ಎಚ್ಚರಿಕೆಯಿಂದ ಇರುವುದು ಅಗತ್ಯ” ಎಂದು ಬನ್ಸಾಲ್ ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.”ಇದು ಸಂಭ್ರಮಾಚರಣೆಯ ಸಂದರ್ಭ. ನಾವು ಆಹ್ವಾನ ಪತ್ರಿಕೆಗಳನ್ನು ಕಳುಹಿಸುತ್ತಿದ್ದೇವೆ. ನಾವು ಯಾವುದೇ ದೇಣಿಗೆಗಳನ್ನು ಸಂಗ್ರಹಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ರಾಮ ಮಂದಿರದಕ್ಕೆ ದೇಣಿಗೆ ನೀಡುವಂತೆ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹಾಗೂ ಫೋನ್ ಕರೆಗಳು ಬರತೊಡಗಿದ ಬಳಿಕ ಈ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. ಇಂತಹ ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ಆ ಸಂಖ್ಯೆಯನ್ನು ವಿಎಚ್ಪಿ ಕಾರ್ಯಕರ್ತರಿಗೆ ನೀಡಿದ್ದಾರೆ. ವಿಎಚ್ಪಿ ಸದಸ್ಯರೊಬ್ಬರು ಆ ಸಂಖ್ಯೆಗೆ ಕರೆ ಮಾಡಿದ್ದು, ವಂಚಕರ ತಂತ್ರಗಳು ಪತ್ತೆಯಾಗಿದೆ ಎನ್ನಲಾಗಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/