ನ್ಯೂಸ್ ನಾಟೌಟ್ : ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ರಾತ್ರಿ ಕೆಲಸದಲ್ಲಿರುವವ ಉಪಯೋಗಕ್ಕಾಗಿ ವಿವಿಧ ಕ್ರಮಗಳನ್ನು ಜಾರಿಗೊಳಿಸಿದೆ.(KSRTC)
ಚಾಲಕರ ನಿದ್ರಾ ಮಂಪರು ತಪ್ಪಿಸಲು ಥರ್ಮೋ ಫ್ಲಾಸ್ಕ್ ಗಳನ್ನು ನೀಡಿದ್ದು, ಮಾರ್ಗ ಮಧ್ಯದಲ್ಲಿ ಹೋಟೆಲ್ ಇರಲಿ ಇಲ್ಲದಿರಲಿ, ಚಾಲಕರು ಚಹಾ, ಕಾಫಿ ಹೀರಿ ವಾಹನ ಚಲಾಯಿಸುವ ಮೂಲಕ ಸುರಕ್ಷಿತ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ರಾತ್ರಿ ಮಾರ್ಗಗಳಲ್ಲಿ ಚಾಲನೆ ಮಾಡುವ ಚಾಲಕರಿಗೆ ಉತ್ತಮ ಗುಣಮಟ್ಟದ ಥರ್ಮೋ ಫ್ಲಾಸ್ಕ್ ಅನ್ನು 1,600 ಅನುಸೂಚಿಗಳ ಜೊತೆಗೆ ನೀಡಿದೆ ಎನ್ನಲಾಗಿದೆ.
ನಿಗಮಕ್ಕೆ ಪ್ರಯಾಣಿಕರು ಹಾಗೂ ತನ್ನ ಸಿಬ್ಬಂದಿಯ ಸುರಕ್ಷತೆ ಪ್ರಥಮ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ತನ್ನ ಕಾರ್ಯಾಚರಣೆ ಹಾಗೂ ಸಂಬಂಧಿಸಿದ ಇತರೆ ಅಂಶಗಳನ್ನು ಕಾಲಕಾಲಕ್ಕೆ ಪರಾಮರ್ಶಿಸಿ ಪರಿಹಾರಾರ್ಥ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಈಗ ಥರ್ಮೋ ಫ್ಲಾಸ್ಕ್ ನೀಡಲಾಗಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.
ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ನಿಗಮದ ವಾಹನಗಳು ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿ ಇದ್ದಾಗ ಬೆಳಗಿನ ಜಾವ 3ರಿಂದ 4 ಗಂಟೆಯ ಸಮಯದಲ್ಲಿ ಹೆಚ್ಚು ಅಪ * ಘಾತಕ್ಕೀಡಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಗಣಿಸಿ ಪ್ರಯಾಣಿಕರಿಗೆ ಸುರಕ್ಷಿತ ಸೇವೆ ಒದಗಿಸುವ ಸಲುವಾಗಿ, ಚಾಲಕರಿಗೆ ನೆರವಾಗುವುದು ಹಾಗೂ ಅವರ ಕಾರ್ಯಕ್ಷಮತೆ ಉತ್ತಮ ಪಡಿಸುವುದು ಅಗತ್ಯವಾಗಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ರಾತ್ರಿ ವೇಳೆ ರಿಫ್ರೆಶ್ ಆಗಲು ಕಾಫಿ, ಟೀ ಸೇವಿಸಿ (ಆ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಯಾವುದೇ ಹೋಟೆಲ್ಗಳ ಲಭ್ಯತೆ ಇರದ ಕಾರಣ) ವಾಹನವನ್ನು ಸುರಕ್ಷಿತವಾಗಿ ಚಲಾಯಿಸಬಹುದು. ಇದಕ್ಕಾಗಿ ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿ.ಲೀ. ಥರ್ಮೋ ಫ್ಲಾಸ್ಕ್ ಒದಗಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.