ನ್ಯೂಸ್ ನಾಟೌಟ್ : ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಎ ತೊಯ್ಬಾ ಸಂಸ್ಥಾಪಕ ಹಫೀಜ಼್ ಸಯೀದ್ನನ್ನು ಹಸ್ತಾಂತರ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದು ವರದಿ ತಿಳಿಸಿದೆ.
26/11ರ ದಾಳಿಯ ರೂವಾರಿ ಸಯೀದ್ ಈಗಲೂ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಲವು ಉಗ್ರ ಕೃತ್ಯಗಳಲ್ಲಿ ಆರೋಪಿಯಾಗಿದ್ದು, ಭಾರತದ ರಾಷ್ಟ್ರೀಯ ತನಿಖಾ ದಳ(ಎನ್ಐಎ) ದಾಖಲಿಸಿಕೊಂಡಿರುವ ಹಲವು ಪ್ರಕರಣಗಳಲ್ಲಿ ಈತನನ್ನು ವಿಚಾರಣೆ ಮಾಡುವ ಸಲುವಾಗಿ ಭಾರತಕ್ಕೆ ಹಸ್ತಾಂತರಕ್ಕೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಭಾರತ ಮನವಿ ಸಲ್ಲಿಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದರೂ ಉಭಯ ದೇಶಗಳ ನಡುವೆ ಯಾವುದೇ ಹಸ್ತಾಂತರ ಒಪ್ಪಂದ ಜಾರಿಯಲ್ಲಿಲ್ಲ ಎಂದು ಹೇಳಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನ ವಿಚಾರಣೆಗಾಗಿ ಹಸ್ತಾಂತರ ಮಾಡಲು ಕೋರಲಾಗಿತ್ತು ಎಂದು ವರದಿ ತಿಳಿಸಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಇದೀಗ ಪಾಕಿಸ್ತಾನ ರಾಜಕೀಯ ಪ್ರವೇಶಿಸಿದ್ದಾನೆ. ಸಯೀದ್ ನೇತೃತ್ವದಲ್ಲಿ ಪಾಕಿಸ್ತಾನ್ ಮರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಎಂಬ ಪಕ್ಷವನ್ನು ಸ್ಥಾಪಿಸಲಾಗಿದ್ದು, ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಪಕ್ಷ ತಿಳಿಸಿದೆ ಎನ್ನಲಾಗಿದೆ.
ಭಯೋತ್ಪಾದನೆ ಪ್ರಕರಣದಲ್ಲಿ ಸಯೀದ್ 2019 ರಿಂದಲೂ ಜೈಲಿನಲ್ಲಿದ್ದಾನೆ. ಸಯೀದ್ನ ಬೆಂಬಲಿಗರು ಅಥವಾ ಲಷ್ಕರ್- ಸದಸ್ಯರೇ ಇದೀಗ ಪಕ್ಷ ಸ್ಥಾಪಿಸಿ ಚುನಾವಣೆ ಕಣಕ್ಕಿಳಿದಿದ್ದಾರೆ. ಸಯೀದ್ ಪುತ್ರ ತಲ್ಹಾ ಸಯೀದ್ ಲಾಹೋರ್ನ ಪ್ರಮುಖ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾನೆ ಎನ್ನಲಾಗಿದೆ.