ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ತವರು ರಾಜ್ಯ ಗುಜರಾತ್ನಲ್ಲಿ ಟೆಸ್ಲಾ (Tesla) ಕಂಪನಿ ತನ್ನ ಫ್ಯಾಕ್ಟರಿ ತೆರೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಕಳೆದ ಕೆಲ ವರ್ಷಗಳಿಂದ ಅಟೋಮೊಬೈಲ್ ಕ್ಷೇತ್ರಕ್ಕೆ ಗುಜರಾತ್ ಉದ್ಯಮ ಸ್ನೇಹಿ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಟೆಸ್ಲಾ ಇಲ್ಲೇ ತನ್ನ ಘಟಕ ತೆರೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ಸಾನಂದ್, ಬೆಚರಾಜಿ ಅಥವಾ ಧೋಲೇರಾ ಪೈಕಿ ಒಂದು ಜಾಗದಲ್ಲಿ ಘಟಕ ನಿರ್ಮಾಣವಾಗಲಿದೆ. ಈಗಾಗಲೇ ಗುಜರಾತ್ನಲ್ಲಿ ಮಾರುತಿ ಸುಜುಕಿ, ಸಿಇಎಟಿ ಟಯರ್, ಫೋರ್ಡ್, ಹೋಂಡಾ, ಎಂಜಿ ಮೋಟಾರ್, ಜೆಸಿಬಿ ಕಂಪನಿಗಳು ಉತ್ಪಾದನಾ ಘಟಕವನ್ನು ತೆರೆದಿವೆ.
ಟೆಸ್ಲಾ ಕಂಪನಿ ಭಾರತದಲ್ಲಿ ಘಟಕ ತೆರೆಯಲಿದೆ ಎಂಬ ಸುದ್ದಿ ಕೆಲ ವರ್ಷಗಳಿಂದ ಪ್ರಕಟವಾಗುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಎಲ್ಲಿ ಘಟಕ ತೆರೆಯಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಗುಜರಾತ್ನಲ್ಲಿ ಫ್ಯಾಕ್ಟರಿ ತೆರೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ ಎನ್ನಲಾಗಿದೆ.