ನ್ಯೂಸ್ ನಾಟೌಟ್: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾರಿ ಸುದ್ದಿಯಾಗಿದ್ದರು. ಕಾರಣ ಜಾರಾ ಪಟೇಲ್ ಎಂಬ ಮಹಿಳೆಯ ವಿಡಿಯೋಗೆ ರಶ್ಮಿಕಾರ ಡೀಪ್ಫೇಕ್ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ದೇಶದಲ್ಲಿ ಡೀಪ್ಫೇಕ್ ವಿಡಿಯೋಗಳ ಹಾವಳಿ ಮತ್ತೆ ಹೆಚ್ಚಾಯಿತು.ಬಳಿಕ ಈ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿತು.
ಇದರ ವಿರುದ್ಧ ಧ್ವನಿಯೆತ್ತಿದ್ದ ಅನೇಕ ಕಲಾವಿದರು ಸೇರಿದಂತೆ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಭಾರತ ಸರ್ಕಾರ ಇದೀಗ ಸೋಶಿಯಲ್ ಮೀಡಿಯಾಗೆ ಸುತ್ತೋಲೆ ಹೊರಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಡೀಪ್ಫೇಕ್ ಹಾವಳಿ ನಿಯಂತ್ರಿಸಲು ಕಠಿಣ ಕ್ರಮ ತೆಗದುಕೊಳ್ಳಲು ಮುಂದಾಗಬೇಕು. ಅದಕ್ಕಾಗಿ ಐಟಿ ನಿಯಮಗಳನ್ನು (IT Rules) ಪಾಲಿಸಬೇಕು ಎಂದು ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನೊಲಾಜಿ ಸಚಿವಾಲಯ ಸೂಚನೆ ನೀಡಿದೆ. ದೈಹಿಕ ಗೌಪ್ಯತೆ, ಖಾಸಗಿ ವಿಚಾರ, ಅಶ್ಲೀಲ ಕಂಟೆಂಟ್ಗಳು ನಿಷೇಧ ಎಂದು ಐಟಿ ಆ್ಯಕ್ಟ್ನ Rule 3(1)(b) ಹೇಳುತ್ತದೆ. ಅದರ ಅಡಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಸ್ ಅದರ ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳ ಮೂಲಕ ನಿಯಮ 3 (1) (ಬಿ) ಅಡಿಯಲ್ಲಿ ಪಟ್ಟಿ ಮಾಡಲಾದ ನಿಷೇಧಿತ ವಿಷಯದ ಬಗ್ಗೆ ಬಳಕೆದಾರರಿಗೆ ತಿಳಿಸಬೇಕು. ಪ್ಲಾಟ್ಫಾರ್ಮ್ ನೋಂದಣಿ ಸಮಯದಲ್ಲೇ ಬಳಕೆದಾರರಿಗೆ ಅಂತಹ ನಿಷೇಧಿತ ವಿಷಯದ ಬಗ್ಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಬಳಕೆದಾರರು ಪ್ಲಾಟ್ಫಾರ್ಮ್ಗೆ ಲಾಗ್ ಇನ್ ಮಾಡಿದಾಗ ಮತ್ತು ಆಕ್ಷೇಪಾರ್ಗ ಕಂಟೆಂಟ್ಗಳನ್ನು ಅಪ್ಲೋಡ್ ಮಾಡಿದಾಗ ಅವರನ್ನು ಎಚ್ಚರಿಸುವ ಪ್ರಯತ್ನ ಮಾಡಬೇಕು. ಬಳಿಕ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
——————–