ನ್ಯೂಸ್ ನಾಟೌಟ್: ಬೆಳೆಯುವವರನ್ನ ತುಳಿಯುವವರೇ ಹೆಚ್ಚು. ಇಲ್ಲ ಸಲ್ಲದ ಚಾಡಿ ಹೇಳಿ ಎತ್ತಿಕಟ್ಟಿ ಮಜಾ ನೋಡೊ ಜನರ ಮಧ್ಯೆ ಇಲ್ಲೊಬ್ಬ ನಾಯಕ ಬೆಳೆಯೋ ಯುವಕನಿಗೆ ತನ್ನ ದುಬಾರಿ ಬೆಲೆಯ ಅಚ್ಚು ಮೆಚ್ಚಿನ ಕ್ಯಾಮೆರಾವನ್ನೇ ಗಿಫ್ಟ್ ಆಗಿ ನೀಡಿ ಆಶೀರ್ವದಿಸಿದ್ದಾರೆ.
ಸುಳ್ಯ ಪರಿಸರ ಸಣ್ಣದು. ಇಂತಹ ಸುಳ್ಯದಲ್ಲೊಂದು ಮೆಡಿಕಲ್ ಕಾಲೇಜು ಸೇರಿದಂತೆ ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಸಾಮಾನ್ಯ ಸಾಧನೆ ಮಾಡಿದ್ದು ದಿವಂಗತ ಕುರುಂಜಿ ವೆಂಕಟರಮಣ ಗೌಡರು. ಇಂತಹ ಧೀಮಂತ ನಾಯಕನ ಮೊಮ್ಮಗ ಹಾಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಜನಮಾನಸದಲ್ಲಿ ಪರಿಚಿತರು. ಎಒಎಲ್ಇ ಆಡಳಿತ ಚುಕ್ಕಾಣಿ ವಹಿಸಿಕೊಂಡ ಬಳಿಕ ಬ್ಯುಸಿಯಾಗಿರುವ ಅವರು ಸ್ವಲ್ಪ ಬಿಡುವು ಮಾಡಿಕೊಂಡು ಸಮಾಜದೊಂದಿಗೆ ಕೂಡ ಸ್ಪಂದಿಸುತ್ತಾರೆ. ಇವರು ಬಡವರು, ಅವರು ಶ್ರೀಮಂತರೂ ಅನ್ನುವ ಭೇದಭಾವ ಅಕ್ಷಯ್ ಕೆ.ಸಿ ಅವರಿಗಿಲ್ಲ. ಯುವಕರನ್ನು ಬೆಳೆಸುವುದರಲ್ಲಿ ಎತ್ತಿದ ಕೈ. ಅಂತೆಯೇ ಇದೀಗ ಸುಳ್ಯದಲ್ಲಿ ಯುಟ್ಯೂಬರ್ ವಿಜೆ ವಿಖ್ಯಾತ್ ಹೊಸದಾಗಿ ತೆರೆದಿರುವ ‘ಎ ಟು ಝೆಡ್’ ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಕ್ಷಯ್ ಕೆ.ಸಿ ಅವರು ಕೂಡ ಹೋಗಿದ್ದರು. ಈ ವೇಳೆ ಮಾತನಾಡಿದ ಅಕ್ಷಯ್ ಕೆ.ಸಿ ಅವರು, “ವ್ಲಾಗ್ಸ್ ಮಾಡಬೇಕೆಂಬುವ ಕಾರಣಕ್ಕೆ ನಾನೊಂದು ಕ್ಯಾಮೆರಾವನ್ನು ಖರೀದಿಸಿದ್ದೆ. ಅದನ್ನು ನಾನು ಒಂದೆರಡು ಸಲ ಅಷ್ಟೇ ಉಪಯೋಗಿಸಿದ್ದೆ, ಆನಂತರ ಅದನ್ನು ಉಪಯೋಗಿಸುವುದಕ್ಕೆ ಕಾಲಾವಕಾಶ ಸಿಕ್ಕಿರಲಿಲ್ಲ. ನಾನು ಪ್ರತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹೊರಟಾಗಲೂ ಏನಾದರೂ ಕೊಟ್ಟು ಶುಭ ಹಾರೈಸುತ್ತೇನೆ. ಇಲ್ಲಿಗೆ ಬಂದು ಏನು ಕೊಡಲಿ ಎಂದು ಯೋಚಿಸುತ್ತಿದ್ದೆ. ಹಣ ಕೊಡುವುದು ತಪ್ಪಾಗಬಹುದು. ಆಗ ನನಗೆ ನೆನಪಾಗಿದ್ದು ನನ್ನ ಪ್ರೀತಿಯ ಕ್ಯಾಮೆರಾ, ವಿಖ್ಯಾತ್ ತನ್ನ ಹೆಸರನ್ನೇ ಬ್ರ್ಯಾಂಡ್ ಮಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಹೆಸರನ್ನು ಮಾಡಲಿ ಎಂದು ಹಾರೈಸುತ್ತೇನೆ. ಈ ಕ್ಯಾಮೆರಾವನ್ನು ಅವರ ಕೈಗೆ ನೀಡುತ್ತೇನೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್ ಆರಿಕೋಡಿ, ವಿಜೆ ವಿಖ್ಯಾತ್ ಸ್ನೇಹಿತ ಬಳಗ, ಅತಿಥಿಗಳು ಹಾಜರಿದ್ದರು.