ನ್ಯೂಸ್ ನಾಟೌಟ್: ಹಿಂದೂ ದೇವಾಲಯದ ಗೋಡೆಯಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆಯಲಾಗಿದ ಅಮೆರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ಸಿಟಿಯಲ್ಲಿ ನಡೆದಿದೆ.
ಹಿಂದೂ ಅಮೇರಿಕನ್ ಫೌಂಡೇಶನ್ ತನ್ನ ಎಕ್ಸ್ ಖಾತೆಯಲ್ಲಿ, ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಗಳ ಮೇಲೆ ಘೋಷಣೆಗಳನ್ನು ಬರೆದಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಫೋಟೋದಲ್ಲಿ, ದೇಗುಲದ ಗೋಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ (India) ವಿರುದ್ಧ ದ್ವೇಷಪೂರಿತ ಬರಹಗಳನ್ನು ಬರೆಯಲಾಗಿದೆ. ಇದರ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ ಎಂದು ವರದಿ ತಿಳಿಸಿದೆ.
ಅಮೇರಿಕಾದಲ್ಲಿ ಹಿಂದೂ ದೇವಾಲಯವನ್ನು ವಿರೂಪಗೊಳಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳು ದೇಶ ಹಾಗೂ ನೆರೆಯ ಕೆನಡಾದಲ್ಲಿಯೂ ನಡೆದಿವೆ.
ಘಟನೆಯ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಪ್ರತಿಷ್ಠಾನ ಒತ್ತಾಯಿಸಿದೆ. ಅಲ್ಲದೆ ಈ ಕುರಿತು ನೆವಾರ್ಕ್ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ನಾಗರಿಕ ಹಕ್ಕುಗಳ ವಿಭಾಗಕ್ಕೆ ದೂರು ನೀಡಿದೆ.
ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಯ ಮೇಲೆ ಬರೆದಿರುವ ದ್ಷೇಷದ ಬರಹಗಳನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಖಂಡಿಸಿದೆ. ಇದನ್ನು ಬರೆದಿರುವ ಕಿಡಿಗೇಡಿಗಳ ವಿರುದ್ಧ ತ್ವರಿತ ತನಿಖೆ ಮತ್ತು ಕಠಿಣ ಕ್ರಮಕ್ಕಾಗಿ ಯುಎಸ್ ಅಧಿಕಾರಿಗಳಿಗೆ ಒತ್ತಡ ಹೇರಿದೆ.
ಕ್ಯಾಲಿಫೋರ್ನಿಯಾದ ನೆವಾರ್ಕ್ನಲ್ಲಿರುವ ಎಸ್ಎಂವಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದ ಗೋಡೆಯಲ್ಲಿ ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆಯು ಭಾರತೀಯ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಕುರಿತು ಶೀಘ್ರವೇ ತನಿಖೆ ನಡೆಸಿ ಹಾಗೂ ಈ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ನಾವು ಒತ್ತಾಯಿಸಿದ್ದೇವೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.