ನ್ಯೂಸ್ ನಾಟೌಟ್: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟುಗಳು ತಲೆದೂರಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ನಡುವೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನನ್ನು ಸಂಪರ್ಕಿಸಿದ್ದು , ಬುಧವಾರ ನಡೆದ INDIA ಮೈತ್ರಿಕೂಟದ ಸಭೆಯಲ್ಲಿ ನಿತೀಶ್ ಕುಮಾರ್ ರನ್ನು INDIA ಮೈತ್ರಿಕೂಟದ ಸಂಚಾಲಕ ಅಥವಾ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಹುದು ಎನ್ನಲಾಗಿದೆ.
ಈ ನಡುವೆ, INDIA ಮೈತ್ರಿಕೂಟಕ್ಕೆ ಆಗಬಹುದಾದ ಹಾನಿಯನ್ನು ಸರಿಪಡಿಸುವ ಭಾಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ ಮತ್ತು ರಾಹುಲ್ ಗಾಂಧಿ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮೈತ್ರಿಕೂಟ ಒಪ್ಪಿದರೆ ಅಥವಾ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುವುದಿದ್ದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ವರಿಷ್ಠರ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗಿದೆ.
ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಎದುರಿಸಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಛತ್ತೀಸ್ ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು ಎಂದು ಕಾಂಗ್ರೆಸ್ ಸಭೆಯಲ್ಲಿ ಚರ್ಚಿಸಲಾಗಿದೆ.
ಈ ಕುರಿತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.