ನ್ಯೂಸ್ ನಾಟೌಟ್ : ನೂತನ ರೂಪಾಂತರಿ ಜೆಎನ್.1 (Covid JN.1 subvariant) ಹರಡುತ್ತಿದ್ದು, ಅಲ್ಲಲ್ಲಿ ಪ್ರಕರಣಗಳು ವರದಿಯಾಗುತ್ತಿದೆ. ಈ ಮಧ್ಯೆ ತಜ್ಞರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.ಜತೆಗೆ ಭಯ ಬಿಟ್ಟು ಕೊರೊನಾ ವೈರಸ್ ಜೀವನದ ಶಾಶ್ವತ ಭಾಗ ಎನ್ನುವ ಅಂಶವನ್ನು ಅರಗಿಸಿಕೊಳ್ಳಬೇಕುʼʼ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಮಾಜಿ ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು “ವೈರಸ್ ನಮ್ಮೊಂದಿಗೆ ವಾಸಿಸುತ್ತಲೇ ಇರುತ್ತದೆ ಮತ್ತು ಕೆಲವು ಸಮಯಗಳ ನಂತರ ಹೊಸ ರೂಪಾಂತರವಾಗಿ ಬದಲಾಗುತ್ತಲೇ ಇರುತ್ತದೆ. ಎಂದು ಅವರು ತಿಳಿಸಿದ್ದಾರೆ. “ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರಲ್ಲಿ ರೋಗ ಲಕ್ಷಣ ಹೆಚ್ಚಾದಾಗ ಮುಂಜಾಗರೂಕತೆ ವಹಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಡಾ. ರಾಮನ್ ಪ್ರಕಾರ ಅಮೆರಿಕದಲ್ಲಿ ಜೆಎನ್ .1 ರೂಪಾಂತರವು ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ. 31ರಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ. ಅಂದರೆ ಪ್ರತಿ ಮೂರು ವ್ಯಕ್ತಿಗಳ ಪೈಕಿ ಒಬ್ಬರಲ್ಲಿ ಕಂಡುಬಂದಿದೆ. ಈ ರೂಪಾಂತರವು ಮೊದಲು ಸೆಪ್ಟಂಬರ್ನಲ್ಲಿ ಅಮೆರಿಕದಲ್ಲಿ ಪತ್ತೆಯಾಯಿತು. ಈಗ ವಿಶ್ವದಾದ್ಯಂತ ಸುಮಾರು 40 ದೇಶಗಳಲ್ಲಿ ಹರಡಿದೆ. “ಅಮೆರಿಕದಲ್ಲಿ ಈ ವೈರಸ್ ಸೋಂಕು ಹೆಚ್ಚಿನ ಕೊನೆಯುಸಿರಿಗೆ ಕಾರಣವಾಗಿಲ್ಲ ಎನ್ನುವುದು ಗಮನಾರ್ಹʼʼ ಎಂದವರು ತಿಳಿಸಿದ್ದಾರೆ.
ವೈರಸ್ ರೂಪಾಂತರಗೊಳ್ಳುತ್ತಿರುವ ರೀತಿಯನ್ನು ನೋಡಿದರೆ ಡೆಲ್ಟಾ ಅಲೆಯ ನಂತರ ಸೌಮ್ಯವಾಗಿ ಬದಲಾಗುತ್ತಿರುವುದು ಕಂಡು ಬಂದಿದೆ. ಜೆಎನ್.1 ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅದರ ಸ್ಪೈಕ್ ಪ್ರೋಟೀನ್ನಲ್ಲಿರುವ ವ್ಯತ್ಯಾಸವು ಬಹುಶಃ ಅದನ್ನು ಹೆಚ್ಚು ಹರಡುವಂತೆ ಮಾಡುತ್ತದೆ. ಆದ್ದರಿಂದ ದುರ್ಬಲರು, ವಯಸ್ಸಾದವರು ಎಚ್ಚರಿಕೆ ವಹಿಸಬೇಕಿದೆ. ನಮ್ಮ ಜೀವನಶೈಲಿಯನ್ನು ವೈರಸ್ಗೆ ಹೊಂದಿಸಿಕೊಳ್ಳಬೇಕುʼʼ ಎಂದು ಡಾ. ರಾಮನ್ ಸಲಹೆ ನೀಡಿದ್ದಾರೆ.