ಬೆಂಗಳೂರು: ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಮುಖ್ಯಮಂತ್ರಿ ಜೊತೆ ಈಗಾಗಲೇ ಹಲವು ಬಾರಿ ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಆದ್ದರಿಂದ, ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮನವಿ ಮಾಡಿದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಂಗಳವಾರ ನಡೆದ ಮೂರು ತಾಸುಗಳ ಸಭೆಯ ಬಳಿಕ ಅವರು ಈ ಭರವಸೆ ನೀಡಿದರು.
ಕರೋನಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತ್ಯೇಕವಾಸದಲ್ಲಿದ್ದಾರೆ. ಅವರ ಜತೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮತ್ತಿತರ ಅಂಶಗಳಿವೆ. ಒಟ್ಟಿನಲ್ಲಿ ವಿಷಯವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದರು.