ನ್ಯೂಸ್ ನಾಟೌಟ್: ಅಂಗನವಾಡಿ ಕೇಂದ್ರದ ಸಿಬ್ಬಂದಿಯೊಬ್ಬರ ಎಡವಟ್ಟಿಗೆ ಮಗು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಹುಬ್ಬಳ್ಳಿಯ ಉಣಕಲ್ನ ನಿವಾಸಿ ಜಟ್ಟೆಪ್ಪರ ಮೊಮ್ಮಗ ಧ್ರುವ (2 ವರ್ಷ) ದುರಂತಕ್ಕೆ ತುತ್ತಾದ ಮಗು. ತಾತ ಹಾಗೂ ಅಜ್ಜಿಯ ಮನೆಯಲ್ಲಿ ಧ್ರುವ ವಾಸವಿದ್ದ. ಒಂದೇ ದಿನ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್ ನಿಂದ ಮಗು ಇನ್ನಿಲ್ಲದಂತಾಗಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿ ವಿರುದ್ಧ ಆರೋಪಿಸಲಾಗಿದೆ.
ಬುಧವಾರ ಹುಬ್ಬಳ್ಳಿಯ ಸಾಯಿನಗರದ ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಲಸಿಕೆ ಹಾಕಿದ್ದರು. ಲಸಿಕೆ ಹಾಕಿದ ಬಳಿಕ ತೀವ್ರ ಜ್ವರ, ಹೊಟ್ಟೆ ನೋವಿನಿಂದ ಮಗು ಬಳಲಿದ್ದು, ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವನ್ನು ಮಗುವಿನ ಅಜ್ಜಿ ದಾಖಲಿಸಿದ್ದರು. ಕಿಮ್ಸ್ಗೆ ದಾಖಲಾಗುತ್ತಿದ್ದಂತೆಯೇ ಮಗು ಕೊನೆಯುಸಿರೆಳೆದಿದೆ. ಆಸ್ಪತ್ರೆ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇವತ್ತು 3.25 ಕ್ಕೆ ಮಗು ಕಿಮ್ಸ್ನಲ್ಲಿ ದಾಖಲಾಗಿತ್ತು. ಮಗು ನಮ್ಮಲ್ಲಿ ಬಂದಾಗ ಕೊನೆಯುಸಿರೆಳೆದಿತ್ತು. ಮಗುವಿನ ಉಸಿರಾಟ ಇರಲಿಲ್ಲ. ಮಗುವಿಗೆ ತಾಜ ನಗರದಲ್ಲಿ ಲಸಿಕೆ ಹಾಕಿಸಿದ್ದಾರೆ. 16 ರಿಂದ 24 ತಿಂಗಳ ಮಗುವಿಗೆ ಲಸಿಕೆ ಕೊಡಬೇಕು. ಅದೇ ರೀತಿ ಅಂಗನವಾಡಿಯಲ್ಲಿ ಲಸಿಕೆ ಹಾಕಿದ್ದಾರೆ. ಅಕಸ್ಮಾತ್ ಮಗುವಿಗೆ ಲಸಿಕೆ ರಿಯಾಕ್ಷನ್ ಆಗಿದ್ದರೆ ನಿನ್ನೆಯೇ ಆಗಬೇಕಿತ್ತು.
ಆದರೆ ಲಸಿಕೆ ರಿಯಾಕ್ಟ್ ಆಗಿರುವ ತರಹ ಕಾಣುತ್ತಿಲ್ಲ ಎಂದಿದ್ದಾರೆ. ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಮಗು ಕುಸಿದುಬಿದ್ದಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿ ಆಕ್ಸಿಜನ್ ಇರಲಿಲ್ಲ. ನಮ್ಮಲ್ಲಿ ಬರುವ ಮುನ್ನ ಮಗು ಉಸಿರು ನಿಲ್ಲಿಸಿತ್ತು. ಮಗು ಇನ್ನಿಲದಂತಾಗಿರುವುದಕ್ಕೆ ನಿಖರ ಕಾರಣ ತಿಳಿತಿಲ್ಲ. ವೈದ್ಯಕೀಯ ಪರೀಕ್ಷೆ ಆದ ಬಳಿಕ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.