ನ್ಯೂಸ್ ನಾಟೌಟ್ : ಉದ್ಯೋಗಿಯೊಬ್ಬರು ಸರಕಾರಿ ಬಸ್ಗೆ ಹತ್ತುವಾಗ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣವೊಂದು ವರದಿಯಾಗಿತ್ತು. ಇದೀಗ ಆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಭೇದಿಸಿದ್ದು,ಈ ಸಂಬಂಧ ಇಬ್ಬರು ತಮಿಳುನಾಡು ರಾಜ್ಯದ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾರಿಜಾ ಅವರು ಸರಕಾರಿ ಉದ್ಯೋಗಿಯಾಗಿದ್ದು, ಡಿ. 12ರಂದು ಸರಕಾರಿ ಬಸ್ ಹತ್ತುವ ವೇಳೆ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.ಇದೀಗ ಪೊಲೀಸರು ಇಬ್ಬರು ಕಳ್ಳಿಯರನ್ನು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ತಿರುಪುರ್ ಜಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30)ಬಂಧಿತರು. ಈ ವೇಳೆ ಕಳ್ಳತನ ಮಾಡಿದ ಕರಿಮಣಿ ಸರವನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಗಳ ವಿರುದ್ಧ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ಹಲವು ಕಡೆ ಕಳ್ಳತನ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ಉಪನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.