ನ್ಯೂಸ್ ನಾಟೌಟ್ :ಕುತ್ತಿಗೆಗೆ ಗರಗಸ ತಾಗಿ ವ್ಯಕ್ತಿ ಕೊನೆಯುಸಿರೆಳೆದ ಘಟನೆ ಬೆಳ್ತಂಗಡಿಯ ಸಾವ್ಯ ಹೊಸಮನೆ ಎಂಬಲ್ಲಿಂದ ವರದಿಯಾಗಿದೆ. ಮರ ಕಡಿಯುವ ಕಟ್ಟಿಂಗ್ ಮಿಷನ್ ಚಾಲನ ಸ್ಥಿತಿಯಲ್ಲೇ ತಾಗಿ ವ್ಯಕ್ತಿ ದುರಂತ ಅಂತ್ಯ ಕಂಡಿದ್ದಾರೆ.
ಪ್ರಶಾಂತ್ ಪೂಜಾರಿ(36) ಉಸಿರು ಚೆಲ್ಲಿದ ವ್ಯಕ್ತಿ.ಇವರು ಸಾವ್ಯ ಹೊಸಮನೆ ನಿವಾಸಿಯಾಗಿದ್ದು,ಮನೆಯ ಮರ ಕಡಿಯಲೆಂದು ಕಟ್ಟಿಂಗ್ ಮೆಷನ್ ಜೊತೆ ಮರವೇರಿದ್ದ ಪ್ರಶಾಂತ್ ಪೂಜಾರಿಯವರಿಗೆ ಕಟ್ಟಿಂಗ್ ಮಾಡುತ್ತಿದ್ದಾಗಲೇ ಮರದಿಂದ ಕೆಳಗೆ ಬಿದ್ದಿದ್ದಾರೆ.ಈ ಸಂದರ್ಭ ಕಟ್ಟಿಂಗ್ ಮೆಷಿನ್ ಚಾಲನಾ ಸ್ಥಿತಿಯಲ್ಲಿದ್ದು, ಕಟ್ಟಿಂಗ್ ಮೆಷಿನ್ ನಿಂದಾಗಿ ಕುತ್ತಿಗೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ತೀವ್ರ ರಕ್ತ ಸ್ರಾವವಾಗಿ ಗಂಭೀರ ಗಾಯಗೊಂಡ ಪ್ರಶಾಂತ್ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಶಾಂತ್ ಪೂಜಾರಿಯವರಿಗೆ 2024ರ ಮಾರ್ಚ್ ನಲ್ಲಿ ಮದುವೆಯೂ ನಿಗದಿಯಾಗಿತ್ತು.