ನ್ಯೂಸ್ ನಾಟೌಟ್ : ಜೈಲಿನ ಹೊರಗೆ 9 ವರ್ಷದ ಬಾಲಕಿಯ ಕಣ್ಣೀರನ್ನು ಕಂಡು ಮರುಗಿದ ಕಾರಾಗೃಹ ಅಧಿಕಾರಿಗಳು, ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿ ಮಾನವೀಯತೆ ಮೆರೆದ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ಮಹಿಳಾ ಉಪ ಕಾರಾಗೃಹದ ಪ್ರವೇಶ ದ್ವಾರದ ಬಳಿ ಬಂದಿದ್ದ 9 ವರ್ಷದ ಬಾಲಕಿ, ಡಿ. 12ರಿಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತನ್ನ ತಾಯಿ ಖದಿಯಾ ಬೀಯನ್ನು ಭೇಟಿಯಾಗಲು ಗೋಗರೆದು ಅತ್ತಿದ್ದಾಳೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತನ್ನ ತಾಯಿಯನ್ನು ನೋಡುವ ಪ್ರಯತ್ನದಲ್ಲಿ, ಅಸಹಾಯಕಳಾಗಿ ಹೊರಗೆ ನಿಂತು ಕಣ್ಣೀರು ಸುರಿಸುತ್ತಿರುವ 9 ವರ್ಷದ ಬಾಲಕಿ ಕುರಿತು ದಾರಿಹೋಕರು, ಒಳಗಿದ್ದ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೊರಗೆ ಬಂದ ಜೈಲು ಅಧಿಕಾರಿಗಳು, ಬಾಲಕಿಯ ಮುಗ್ಧತೆ ಮತ್ತು ಜೈಲಿನಲ್ಲಿರುವ ತನ್ನ ಅಮ್ಮನನ್ನು ನೋಡಲೇಬೇಕು ಎಂಬ ಆಕೆಯ ಪ್ರಯತ್ನಕ್ಕೆ ಒಪ್ಪಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೊನೆಗೆ ಆಕೆಯನ್ನು ಜೈಲಿನ ಒಳಗೆ ಕರೆದುಕೊಂಡು ಹೋಗಿ ತಾಯಿ ಖದಿಯಾ ಬೀ ಜತೆ ಮಾತನಾಡುವ ಅವಕಾಶ ಕಲ್ಪಿಸಿದ್ದಾರೆ. 35 ವರ್ಷದ ಖದಿಯಾ ಬೀಯನ್ನು ಕೆಲವು ವರ್ಷಗಳ ಹಿಂದೆ ಆಕೆಯ ಪತಿ ತ್ಯಜಿಸಿದ್ದ. ಅಂದಿನಿದ ಆಕೆ ಸಣ್ಣಪುಟ್ಟ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಳು. ಆಕೆಗೆ ಇಂತಹ ಚಟುವಟಿಕೆಗಳು ಅಭ್ಯಾಸವಾಗಿದ್ದವು. ಖದಿಯಾಳ ಐವರು ಮಕ್ಕಳಲ್ಲಿ 9 ವರ್ಷದ ಹೆಣ್ಣುಮಗಳು ಇದ್ದಾಳೆ. ತಾವು ವಾಸವಿರುವ ವಡಿಗೆರೆಗೆ ಸಮೀಪದಲ್ಲಿರುವ ಸ್ಥಳೀಯ ತಹಶೀಲ್ದಾರ್ ಕಚೇರಿ ಹತ್ತಿರದಲ್ಲಿನ ಮಹಿಳಾ ಉಪ ಕಾರಾಗೃಹದಲ್ಲಿ ಅಮ್ಮನನ್ನು ಇರಿಸಲಾಗಿದೆ ಎಂದು ಬಾಲಕಿಯ ಅಣ್ಣ ತಿಳಿಸಿದ್ದ. ತುಂಬಾ ದಿನಗಳಿಂದ ಅಮ್ಮ ಮನೆಗೆ ಬಾರದ ಕಾರಣ, ಈ ಪುಟ್ಟ ಬಾಲಕಿ ಕಂಗೆಟ್ಟಿದ್ದಳು. ಅಮ್ಮನನ್ನು ನೋಡಲು ಓಡೋಡಿ ಬಂದಿದ್ದಾಳೆ.
ಅಮ್ಮನನ್ನು ಜೈಲಿಗೆ ಹಾಕಿರುವುದು ಗೊತ್ತಾದ ನಂತರ, ಜೈಲಿನ ಬಳಿ ಬಂದರೆ ಮಾತನಾಡಲು ಅಮ್ಮ ಸಿಗುತ್ತಾಳೆ ಎಂದು ಆಕೆ ಭಾವಿಸಿದ್ದಳು. ಆದರೆ ಸೆರೆಮನೆಯಲ್ಲಿ ಭೇಟಿಯಾಗಲು ಬಹಳ ಪ್ರಕ್ರಿಯೆ ಇರುತ್ತದೆ ಎನ್ನುವುದು ಆಕೆಗೆ ಅರಿವಿರಲಿಲ್ಲ. ಅಧಿಕಾರಿಗಳು ಆಕೆಗೆ ಅಮ್ಮನನ್ನು ಭೇಟಿ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.