ನ್ಯೂಸ್ ನಾಟೌಟ್ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪ್ರಧಾನಿ ಮೋದಿಯವರು ಭರ್ಜರಿ ಆಫರ್ ನೀಡಿದ್ರಾ..?ಈ ಬಗೆಗಿನ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಶುರುವಾಗಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು ಬಲಿಷ್ಠವಾಗಿರುವ ಕಾಂಗ್ರೆಸ್ಸನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಹೈಕಮಾಂಡ್ ಭಾರಿ ಕಸರತ್ತು ನಡೆಸುತ್ತಿದೆ.
ಹೌದು, ಆ ನಿಟ್ಟಿನಲ್ಲಿ ಈಗಾಗಲೇ ತಾನು ಕೈಗೊಂಡಿರುವ ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿರ್ಧರಿಸಲಾಗಿದ್ದು,ಇದಕ್ಕಾಗಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಬಂಪರ್ ಆಫರ್ ನೀಡಲು ಬಿಜೆಪಿ ಮುಂದಾಗಿದೆ.
ಮಾಹಿತಿಯ ಪ್ರಕಾರ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರು ಸ್ಪರ್ಧಿಸಿ ಗೆಲ್ಲುವಂತವರಾದರೆ ಅವರನ್ನು ಕೇಂದ್ರ ಸಚಿವರನ್ನಾಗಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ನಿಜಕ್ಕೂ ಇದೊಂದು ಬಂಪರ್ ಆಫರ್ ಆಗಿದ್ದು ಇದನ್ನು ಈಗಾಗಲೇ ಎಚ್.ಡಿ. ಕುಮಾರಸ್ವಾಮಿಯವರಿಗೆ ತಿಳಿಸಲಾಗಿದೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ನಲ್ಲಿ ಇಂಥದ್ದೊಂದು ಚಿಂತನೆ ಹೊಮ್ಮಿದ ಕೂಡಲೇ ಅದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಲಾಗಿದೆ.
ಇದು ಸರಿಯಾದ ನಿರ್ಧಾರವಾಗಿದೆ ಎಂದು ಮೂವರೂ ನಾಯಕರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಖುದ್ದು ನರೇಂದ್ರ ಮೋದಿಯವರ ಕಡೆಯಿಂದಲೇ ಕುಮಾರಸ್ವಾಮಿಯವರಿಗೆ ಸಂದೇಶ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಏಕಾಏಕಿ ಒದಗಿಬಂದ ಈ ಬಿಗ್ ಆಫರನ್ನು ಕುಮಾರಸ್ವಾಮಿಯವರು ಕೂಡಲೇ ಒಪ್ಪಿಕೊಂಡಿಲ್ಲ. ಮೊದಲು ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬಳಿ ಈ ವಿಚಾರವನ್ನು ಚರ್ಚಿಸಿ ಆನಂತರ ಈ ಬಗ್ಗೆ ತಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.ಸದ್ಯಕ್ಕೆ ವಿದೇಶ ಪ್ರವಾಸದಲ್ಲಿರುವ ಕುಮಾರಸ್ವಾಮಿಯವರು ಬೆಂಗಳೂರಿಗೆ ಬಂದ ಕೂಡಲೇ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಈ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.