ನ್ಯೂಸ್ ನಾಟೌಟ್ :ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಪತಿಯಿಂದ ಪತ್ನಿ ಮತ್ತು ಮಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿನ್ನೆ (ಡಿ.18) ರಾತ್ರಿ 12ಗಂಟೆ ಆಗಿರಬಹುದು. ಮನೆ ಕಡೆ ಕಂಠ ಪೂರ್ತಿ ಕುಡಿದು ತೇಲಾಡುತ್ತ ಬಂದ ಗಂಡನಿಗಾಗಿ ಹೆಂಡತಿ ಬಾಗಿಲು ತೆರೆದಿದ್ದಾರೆ.ಈ ವೇಳೆ ಮನೆಗೆ ಬಂದ ಸುರೇಶ್ ಗೌಡ, ಪತ್ನಿ ಹಾಗೂ ಮಗಳಿಗೆ ಬೈದಿದ್ದಲ್ಲದೇ ಮದ್ಯದ ಅಮಲಿನಲ್ಲಿ ಪತ್ನಿ ಜೊತೆ ಜಗಳವಾಡಿ ಆಕೆಯ ಕಣ್ಣು ಕಚ್ಚಿದ್ದಾನೆ.ನಂತರ ಮುಖದ ಎಡಭಾಗದ ಮಾಂಸ ಕಚ್ಚಿ ತೆಗೆದಿದ್ದಾನೆ. ಪತ್ನಿ ಕಣ್ಣು ಮತ್ತು ಮುಖದ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ ಮಗಳ ಮೇಲೂ ಗಾಯಗಳಾಗಿವೆ. ಸದ್ಯ ತಾಯಿ-ಮಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸುರೇಶ್ ಗೌಡ(55) ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ(55)ಯವರನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಶಿಶಿಲದಲ್ಲಿ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿಯೇ ಸುರೇಶ್ ಗೌಡ ವಾಸವಾಗಿದ್ದ. ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.