ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಆರೋಗ್ಯ ಹಾಗೂ ವಯಸ್ಸಿನ ಕಾರಣದಿಂದಾಗಿ, ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಅಯೋಧ್ಯಾದ ದೇವಸ್ಥಾನ ಟ್ರಸ್ಟ್ ಸೋಮವಾರ ತಿಳಿಸಿದೆ ಎಮದು ವರದಿ ತಿಳಿಸಿದೆ.
ಜನವರಿ 22ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ದೇಶದ ಪ್ರತೀ ಮನೆ ಮನೆಗೂ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ. 1990ರ ದಶಕದಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದ ಹಿರಿಯರನ್ನು ಆಮಂತ್ರಿಸದೆ, ಕಾರ್ಯಕ್ರಮಕ್ಕೆ ಬರದಂತೆ ಮನವಿ ಮಾಡಿರುವ ಟ್ರಸ್ಟ್ನ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
“ಇಬ್ಬರೂ ಕುಟುಂಬದ ಹಿರಿಯರು. ಅವರ ವಯಸ್ಸನ್ನು ಗಮನದಲ್ಲಿ ಇರಿಸಿಕೊಂಡು, ಕಾರ್ಯಕ್ರಮಕ್ಕೆ ಬರಬಾರದು ಎಂದು ಮನವಿ ಮಾಡಲಾಗಿದೆ. ಅದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ” ಎಂದು ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಸಂಸ್ಥಾಪಕ ಸದಸ್ಯರಾದ 96 ವರ್ಷದ ಅಡ್ವಾಣಿ ಅವರು 1990ರಲ್ಲಿ ಗುಜರಾತ್ನ ಸೋಮನಾಥದಿಂದ ಅಯೋಧ್ಯಾಕ್ಕೆ ರಾಮ ರಥ ಯಾತ್ರೆಯನ್ನು ನಡೆಸುವ ಮೂಲಕ ರಾಮಮಂದಿರ ನಿರ್ಮಾಣದ ತಮ್ಮ ಪಕ್ಷದ ಬೇಡಿಕೆಗೆ ಹೋರಾಟದ ರೂಪ ನೀಡಿದ್ದರು. ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಕೂಡ ಬಿಜೆಪಿಯ ಸಂಸ್ಥಾಪಕ ಸದಸ್ಯರಾಗಿದ್ದು ರಾಮ ಮಂದಿರದ ಹೋರಾಟದಲ್ಲಿ ತಮ್ಮ ಜೀವನ ಸವೆಸಿದವು ಎನ್ನಲಾಗಿದೆ.