ನ್ಯೂಸ್ ನಾಟೌಟ್ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ನಿತ್ಯವೂ ಹೊಸ ಸವಾಲೇ ಸರಿ.ಏಕೆಂದರೆ ಕಾಮಗಾರಿ ಹಿನ್ನಲೆಯಲ್ಲಿ ಆ ವ್ಯಾಪ್ತಿಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕೇವಲ ಹದಿನೈದು ನಿಮಿಷ ದೂರ ಪ್ರಯಾಣಿಸುವ ಪ್ರಯಾಣಿಕರು ಟ್ರಾಫಿಕ್ ಜಾಮ್ನಿಂದಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದೊದಗಿದೆ.
ಬಿ.ಸಿ.ರೋಡ್ ನಿಂದ ಅಡ್ಡಹೊಳೆ ತನಕ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಹಿನ್ನಲೆ ಕಲ್ಲಡ್ಕ ಎಂಬಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಕಲ್ಲಡ್ಕ ಪ್ರದೇಶದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಕಿರಿದಾದ ಸರ್ವೀಸ್ ರೋಡ್ ಮಾಡಿದ್ದು,ಅದು ಸಂಪೂರ್ಣ ಹದಗೆಟ್ಟಿದೆ.
ಕಂಪೆನಿಯು ಮಳೆಗಾಲ ಕಳೆದು ರಸ್ತೆಗೆ ಡಾಮರೀಕರಣ ಮಾಡುವ ಭರವಸೆ ನೀಡಿತ್ತು.ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾಮರೀಕರಣ ಮಾಡುವುದಾಗಿ ಕೆ.ಎನ್.ಆರ್ ಕಂಪನಿ ಒಪ್ಪಿಕೊಂಡಿತ್ತು.ಆದರೆ ಇದೀಗ ಮಳೆ ನಿಂತರೂ ಡಾಮರೀಕರಣ ಮಾಡಿಲ್ಲ. ಇದರಿಂದಾಗಿ ವಾಹನಗಳು ರಸ್ತೆಯಲ್ಲಿ ಹಾರಿಕೊಂಡು ಹೋಗಬೇಕಾದ ಸ್ಥಿತಿ ಎದುರಾಗಿದೆ.ಹೊಂಡ-ಗುಂಡಿಗಳಿಗೆ ಸಿಲುಕಿ ಕೆಲವೊಂದು ವಾಹನಗಳು ಕೆಟ್ಟು ಹೋಗುತ್ತಿರುವ ಹಲವು ಸನ್ನಿವೇಶಗಳು ನಡೆದಿವೆ.