ನ್ಯೂಸ್ ನಾಟೌಟ್ : ರಜಾ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ದುರ್ಘಟನೆಯಲ್ಲಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದ ನೆಲ್ಲಿಚೌಕದಲ್ಲಿ ಭಾನುವಾರ(ಡಿ.17) ನಡೆದಿದೆ ಎಂದು ವರದಿ ತಿಳಿಸಿದೆ.
ಶಿರಸಿಯ ಭೈರುಂಭೆ ಸಮೀಪದ ಶಾಲ್ಮಲಾ ನದಿಯಲ್ಲಿ ನಿನ್ನೆ ಈ ದುರಂತ ನಡೆದಿದೆ. ಮೃತರೆಲ್ಲರೂ ಶಿರಸಿ ನಗರದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ರಾಮನಬೈಲಿನ ಮೊಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22), ರಾಮನಬೈಲಿನ ಯುವಕ ಉಮರ್ ಸಿದ್ದಿಕ್ (23) ಕೊನೆಯುಸಿರೆಳೆದವರು ಎಂದು ಗುರುತಿಸಲಾಗಿದೆ.
ಶಿರಸಿ ನಗರದ ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನ ಭಾನುವಾರ ಶಾಲ್ಮಲಾ ನದಿಯ ಭೂತನಗುಂಡಿಯ ಬಳಿ ಅಡುಗೆ ತಯಾರಿ ನಡೆಸಿದ್ದರು.
ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟವಾಡುತ್ತ ಭೂತನಗುಂಡಿಯ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೊಹಮ್ಮದ್ ಸಲೀಂ ಕಲೀಲ್ ಮಗುವನ್ನು ನೀರಿನಿಂದ ರಕ್ಷಿಸಿ, ನಾದಿಯಾ ಎಂಬವರಿಗೆ ನೀಡಿದ್ದಾರೆ. ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ನಾದಿಯಾ ಮತ್ತು ಮೊಹಮ್ಮದ್ ಇಬ್ಬರೂ ಮುಳುಗಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೆ ಮುಳುಗಿ ಕೊನೆಯುಸಿರೆಳೆದ ಘಟನೆ ನಡೆದಿದೆ. ಮಗು ಸುರಕ್ಷಿತವಾಗಿ ಉಳಿದಿದೆ ಎನ್ನಲಾಗಿದೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವನ್ನಪ್ಪಿರುವವರಲ್ಲಿ ನಾದಿಯಾ ನೂರ್ ಎಂಬುವರು ಕಳೆದ 16 ದಿನಗಳ ಹಿಂದಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಎಲ್ಲರ ಮೃತದೇಹಗಳು ಪತ್ತೆಯಾಗಿವೆ.