ನ್ಯೂಸ್ ನಾಟೌಟ್: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಹೀಗೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನ ಬುದ್ದಿ ಕಲಿಸುತ್ತಾರೆ’ ತಿರುಗೇಟು ನೀಡಿದ್ದಾರೆ.
ಟಿಪ್ಪು ಒಬ್ಬ ಮತಾಂಧ, ಮಂಡ್ಯದಲ್ಲಿ ಅವನ ಚರಿತ್ರೆ ಇದೆ. ಕೊಡಗಿನಲ್ಲಿ ಹಿಂದೂಗಳ ಹ * ತ್ಯೆ ಮಾಡಿದ್ದ ಚರಿತ್ರೆ ಇದೆ. ಮೇಲುಕೋಟೆಯಲ್ಲಿ ಬ್ರಾಹ್ಮಣರನ್ನು ಕಟ್ಟಿ ಹಾಕಿ ಮುಗಿಸಿದ ಇತಿಹಾಸ ಇದೆ’ ಎಂದು ಕಿಡಿಕಾರಿದರು.
‘ಮೈಸೂರಿನ ಆಡಳಿತ ನಡೆಸುತ್ತಿದ್ದವರು ಒಡೆಯರ್ ವಂಶಸ್ಥರು. ಹೈದರಾಲಿ ಕೂಲಿಗೆ ಬಂದವನು ಒಡೆಯರ್ ಗೆ ಮೋಸ ಮಾಡಿ ಸಿಂಹಾಸನ ಏರಿದ. ಟಿಪ್ಪುನ ಹೋರಾಟಗಾರ ಎನ್ನುವವರಿಗೆ ನಾಚಿಕೆ ಆಗಬೇಕು. ಟಿಪ್ಪು, ಹೈದರಾಲಿ ಡ್ಯಾಂ ಕಟ್ಟಿಸಿದ್ದಾರಾ? ಒಂದು ಕೆರೆ ಕಟ್ಟಿಸಿದ್ದಾರಾ? ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಸಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.
‘ಕೇವಲ ವೋಟಿಗಾಗಿ ಕಾಂಗ್ರೆಸ್ನವರು ಟಿಪ್ಪುವನ್ನು ಹೋರಾಟಗಾರ ಎಂದು ಕರೆಯುತ್ತಾರೆ. ಕಾಂಗ್ರೆಸ್ನವರು ಟಿಪ್ಪು ಸಿದ್ದಾಂತದ ಮೇಲೆ ಬಂದಿದ್ದಾರೆ. ನಾವು ಹಿಂದುತ್ವದ ಸಿದ್ಧಾಂತದ ಮೇಲೆ ಬಂದಿದ್ದೇವೆ. ಜನರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದಿದ್ದಾರೆ.
‘ಸಂಸತ್ ಒಳಗೆ ಪ್ರವೇಶಿಸಿ ಹೊಗೆ ಬಾಂಬ್ ಸಿಡಿಸಿ ದಾಂದಲೆ ನಡೆಸಿದ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಎಲ್ಲ ಸಂಸದರು ನೀಡಿದ ಹಾಗೆ ಪ್ರತಾಪ್ ಸಿಂಹ ಕೂಡ ಪಾಸ್ ನೀಡಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ನಡೆಯಲಿದೆ. ಈ ಬಗ್ಗೆ ಕಾಂಗ್ರೆಸ್ ಆರೋಪ ಸರಿಯಲ್ಲ. ಪ್ರತಾಪ್ ಸಿಂಹ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವವರು, ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾರಾ’ ಎಂದು ಆರ್ ಆಶೋಕ್ ತಿಳಿಸಿದ್ದಾರೆ.
‘ಮುಂದಿನ ಬಜೆಟ್ ನಾನೇ ಮಂಡಿಸುವುದಾಗಿ ಮುಖ್ಯಮಂತ್ರಿ ಹೇಳಿದರೆ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದವರು ಮಂಡಿಸುತ್ತಾರೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕ ಹರಿಪ್ರಸಾದ್ ಮುಖ್ಯಮಂತ್ರಿ ಗಾದಿಗೆ ಏರಿಸೋದು ಗೊತ್ತು,ಇಳಿಸುವುದು ಗೊತ್ತು ಎಂದರೆ, ಪರಮೇಶ್ವರ್ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಇವರೆಲ್ಲ ಹೀಗೆ ಹೇಳುವಾಗ ಸಿದ್ದರಾಮಯ್ಯ ದಮ್ಮು,ತಾಕತ್ತು ಎಲ್ಲಿ ಹೋಗಿದೆ’ಎಂದು ಕೇಳಿದರು.