ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬ ಪ್ರೀತಿಯಿಂದ 17 ನಾಯಿಗಳನ್ನು ಸಾಕಿದ. ನಾಯಿಗೆ ನಿಯತ್ತಿದೆ ನಿಜ. ಅದು ಸಾಕಿದವರ ಕೈಯನ್ನು ಎಂದೂ ಬಿಡೋದಿಲ್ಲ ಎನ್ನುವ ಮಾತು ಇದೆ. ಆದರೆ ಇದು ಅದಕ್ಕೆ ಸ್ವಲ್ಪ ತದ್ವಿರುದ್ಧ ಎಂಬಂತಿದೆ.ಅನ್ನ ಹಾಕಿ ಬೆಳೆಸಿದ ನಾಯಿಗಳೇ ಆ ವ್ಯಕ್ತಿಯನ್ನು ತಿಂದು ಮುಗಿಸಿದೆ.
ಇಂತಹ ಆಘಾತಕಾರಿ ಘಟನೆ ಅರ್ಜೆಂಟೀನಾದಲ್ಲಿ (Argentina) ನಡೆದಿದೆ. ಅರ್ಜೆಂಟೀನಾದ ತನ್ನ ಮನೆಯೊಳಗೆ ವ್ಯಕ್ತಿಯೊಬ್ಬರ ಅವಶೇಷಗಳು ಪತ್ತೆಯಾಗಿದ್ದು, ಅವರನ್ನು 17 ಹಸಿದ ನಾಯಿಗಳ ಗುಂಪು ತಿಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಿ. 13ರಂದು ಮೆಂಡೋಜಾ (Mendoza) ಪ್ರಾಂತ್ಯದ ಗ್ವಾಯಿಮಲ್ಲೆನ್ನ (Guaymallen) ಕಾರ್ಲೋಸ್ ಟೋನಿನಿ ಅವರ ಮನೆಯಿಂದ ಅಸಹನೀಯ ದುರ್ವಾಸನೆ ಬರುತಿತ್ತು. ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ನೆಲದ ಮೇಲೆ ಬಿದ್ದ ತೊಡೆಯ ಮೂಳೆಗಳು ಕಂಡು ಬಂದಿದ್ದವು. ಜತೆಗೆ ಟಿ-ಶರ್ಟ್ ಬಳಿ ಎಂಟು ಇಂಚಿನ ಎರಡು ಸಣ್ಣ ಮೂಳೆಗಳು ಪತ್ತೆಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ʼʼಅನಾರೋಗ್ಯದ ಕಾರಣದಿಂದ ಟೋನಿನಿ ಉಸಿರು ಚೆಲ್ಲಿದ್ದಾರೆ. ಅವರು ಒಂಟಿಯಾಗಿ ವಾಸಿಸುತ್ತಿದ್ದರಿಂದ ಅವರು ಸಾಕಿದ ನಾಯಿಗಳಿಗೆ ಯಾರೂ ಆಹಾರ ನೀಡಿರಲಿಲ್ಲ.ಇದರಿಂದ ಹಸಿದ ನಾಯಿಗಳು 65 ವರ್ಷದ ಟೋನಿನಿ ಅವರ ದೇಹವನ್ನು ತಿಂದಿವೆʼʼ ಎಂದು ಪೊಲೀಸರು ಊಹಿಸಿದ್ದಾರೆ. ಎರಡು ವರ್ಷಗಳಿಂದ ತಂದೆಯೊಂದಿಗೆ ಸಂಪರ್ಕ ಇರಲಿಲ್ಲ ಎಂದು ಟೋನಿನಿ ಅವರ ಪುತ್ರಿ ಸುಸಾನಾ ಎಲಿಜಬೆತ್ ವಿಡೆಲಾ ಟೋನಿನಿ ಪೊಲೀಸರಿಗೆ ತಿಳಿಸಿದ್ದಾರೆ. ʼʼಟೋನಿನಿ ಒಂಟಿಯಾಗಿ, ತಮ್ಮ ನಾಯಿಯೊಂದಿಗೆ ವಾಸಿಸುತ್ತಿದ್ದರುʼʼ ಎಂದು ನೆರೆ ಮನೆಯವರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಅವರ ಮೇಲೆ ಹಿಂಸೆ ನಡೆದಿರುವ ಕುರುಹುಗಳಿಲ್ಲ. ನಾಯಿಗಳು ಅವರ ಮೇಲೆ ದಾಳಿ ನಡೆಸಿಲ್ಲ.ಅವರ ಅಂತ್ಯದ ಬಳಿಕವೇ ಕಡಿದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.