ನ್ಯೂಸ್ ನಾಟೌಟ್: ಬಿಗಿ ಭದ್ರತೆ ಬೇಧಿಸಿ ಬುಧವಾರ ಲೋಕಸಭಾ ಕಲಾಪಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಪ್ರಕರಣದಲ್ಲಿ 4 ಮಂದಿಯನ್ನು ಬಂಧಿಸಿದರೂ ಇನ್ನೂ ಒಬ್ಬ ಮಾಸ್ಟರ್ ಮೈಂಡ್ ಇರುವುದಾಗಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಆರೋಪಿಗಳ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಅಲ್ಲದೆ, ‘ಅಜ್ಞಾತ ವ್ಯಕ್ತಿ’ಯ ಕೈವಾಡವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ ಎನ್ನಲಾಗಿದೆ.
”ಸಾಮಾನ್ಯ ವ್ಯಕ್ತಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಇಷ್ಟೆಲ್ಲಾ ಸಂಚು ರೂಪಿಸುವುದಿಲ್ಲ. ಇದರ ಹಿಂದೆ ಮತ್ತಷ್ಟು ಮಂದಿ ಇರುವ ಸಾಧ್ಯತೆಯಿದೆ. ಭಯೋತ್ಪಾದನೆ ಕೋನದಲ್ಲೂ ತನಿಖೆ ನಡೆಸುತ್ತೇವೆ,” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಮಂಗಳವಾರ ಸಂಸತ್ ಭವನದ ಒಳಗೆ ನುಗ್ಗಿದ್ದ ಮೈಸೂರಿನ ಮನೋರಂಜನ್ ಮತ್ತು ಉತ್ತರ ಪ್ರದೇಶದ ಸಾಗರ್ ಶರ್ಮಾ, ಹೊರಗೆ ಬಂಧಿಸಲಾದ ಹರಿಯಾಣದ ಹಿಸ್ಸಾರ್ನ ನೀಲಂದೇವಿ ಆಜಾದ್, ಮಹಾರಾಷ್ಟ್ರದ ಲಾತೂರ್ನ ಅಮೋಲ್ ಶಿಂಧೆ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ‘ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ'(ಯುಎಪಿಎ) ಅಡಿಯಲ್ಲಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಗುರುವಾರ ದಿಲ್ಲಿಯ ಪಟಿಯಾಲ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಾಗಿದ್ದು, ನಾಲ್ವರನ್ನೂ ಏಳು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎನ್ನಲಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೊಗ ಸಮಸ್ಯೆ, ನಿಲ್ಲದ ಮಣಿಪುರ ಹಿಂಸಾಚಾರ, ಮಹಿಳಾ ದೌರ್ಜನ್ಯ, ಬಗೆಹರಿಯದ ರೈತರ ಸಂಕಷ್ಟಗಳನ್ನು ಕಣ್ಣಾರೆ ಕಂಡು, ದೇಶದ ಜನರ ಗಮನ ಸೆಳೆಯಲು ಕೃತ್ಯ ಎಸಗಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾದ ಕೋಲ್ಕೊತಾ ಮೂಲದ ಲಲಿತ್ ಝಾ ಸುಳಿವು ಇನ್ನೂ ಪತ್ತೆಯಾಗಿಲ್ಲ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಝಾ, ಸಾಮಾಜಿಕ ಜಾಲತಾಣದಲ್ಲಿ’ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್’ ಫ್ಯಾನ್ ಪೇಜ್ ಮೂಲಕ ಉಳಿದ ಆರೋಪಿಗಳನ್ನು ಸಂಪರ್ಕಿಸಿ, ದಾಳಿಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.