ನ್ಯೂಸ್ ನಾಟೌಟ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ 600ಕ್ಕೂ ಮೆಲ್ಪಟ್ಟು ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದೆ. ಈ ಮೂಲಕ ರೈತಾಪಿ ವರ್ಗದವರಿಗೆ ಮತ್ತು ಜನ-ಜಾನುವಾರುಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿಯ ಮಂಗಳೂರು ಇದರ ಎ.ಜಿ.ಎಂ. ರಮೇಶ್ ವೈದ್ಯ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಿಗ್ರಾಮ ಯೋಜನಾ ವ್ಯಾಪ್ತಿಯ ದುದ್ದ ಹೋಬಳಿಯ ಹೆರಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮನಹಳ್ಳಿಯ ಸರ್ಕಾರಿ ಕಟ್ಟೆ ಕೆರೆಯ ಹೂಳೆತ್ತುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಈಗಾಗಲೇ ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 107 ಕೆರೆಗಳಿಗೆ ಕಾಯಕಲ್ಪವನ್ನು ನೀಡುವ ಕೆಲಸ ಯೋಜನೆಯ ಮೂಲಕ ನಡೆದಿದೆ. ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳ ಸದುಪಯೋಗವನ್ನು ರೈತರು, ಗ್ರಾಮಸ್ಥರು ಪಡೆದುಕೊಳ್ಳುವಂತೆ ತಿಳಿಸಿದರು.
ಹಾಸನ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ತಾಲೂಕು ಯೋಜನಾಧಿಕಾರಿಗಳಾದ ನವೀನ್ ಎಂ. ಕೆರೆ ಅಭಿಯಂತರರಾದ ಭರತ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಕುಮಾರ್. ಸದಸ್ಯರಾದ ಸತ್ತಿಗೆ ಗೌಡ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಲಿಂಗೇ ಗೌಡ, ಕೃಷಿ ಮೇಲ್ವಿಚಾರಕರಾದ ಪ್ರಜ್ವಲ್ ಕೆ.ಎ., ಕೇಶವ ನಾಯ್ಕ ಸೇರಿದಂತೆ ಮತ್ತಿತರರು, ಗ್ರಾಮಸ್ಥರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.