ನ್ಯೂಸ್ ನಾಟೌಟ್ : ಲೋಕಸಭೆಯ ಭದ್ರತಾ ಲೋಪಕ್ಕೆ ಈಗ ಮತ್ತಷ್ಟು ತಿರುವು ಸಿಕ್ಕಿದ್ದು, ಸಂಸತ್ತಿನ ಒಳಗೆ (Smoke Bomb in Loksabha) ಹೋಗಲು ಪಾಸ್ ಕೊಟ್ಟ ಕಾರಣಕ್ಕೆ ಇದೀಗ ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು(ಡಿ.13) ನಡೆದಿದೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿರುವ ಕಚೇರಿ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಪ್ರತಾಪ್ ಸಿಂಹ ಪಾಸ್ ಕೊಟ್ಟಿರುದನ್ನು ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ಕಚೇರಿಯ ಕಾಂಪೌಡ್ ಗೋಡೆ ಏರಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.
ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಬಳಿಕ ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಮೈಸೂರು ಸಂಸದರ ಕಚೇರಿಯಿಂದ ಪಾಸ್ ವಿತರಣೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಮೈಸೂರು ಮೂಲದ ಮನೋರಂಜನ್ ಎಂಬ ಯುವಕ ಮತ್ತು ಯುವತಿ ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಆತನನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಭದ್ರತಾ ಲೋಪದ ಬಗ್ಗೆ ಪೊಲೀಸರು ತೀವ್ರ ತನಿಖೆಯಲ್ಲಿ ತೊಡಗಿದ್ದಾರೆ.