ನ್ಯೂಸ್ ನಾಟೌಟ್: ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಸಂದೇಶ ಕಳುಹಿಸಿ ಆತಂಕ ಸೃಷ್ಟಿಸಿದ್ದ ಘಟನೆಯ ಬೆನ್ನಲ್ಲೇ ಬೆಂಗಳೂರಿನ ರಾಜಭವನಕ್ಕೂ ಬಾಂಬ್ ಬೆದರಿಕೆಯ ಕರೆ ಬಂದ ಘಟನೆ ನಿನ್ನೆ ಡಿ. 12 ರಂದು ನಡೆದಿತ್ತು.
ಬಾಂಬ್ ಬೆದರಿಕೆ ಕರೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಬೆದರಿಕೆ ಕರೆ ಮಾಡಿದ್ದ ಭಾಸ್ಕರ್ ಎಂಬಾತನನ್ನು ಪತ್ತೆ ಮಾಡಿ ಬಂಧಿಸಿದೆ.
ಅಜ್ಞಾತ ಸ್ಥಳದಿಂದ ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ದೊಮ್ಮಲೂರಿನ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ, ”ರಾಜಭವನದಲ್ಲಿ ಬಾಂಬ್ ಇಟ್ಟಿದ್ದೇವೆ. ಕೆಲವೇ ಕ್ಷಣದಲ್ಲಿಅದು ಸ್ಫೋಟಗೊಳ್ಳಲಿದೆ” ಎಂದು ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ರಾಜಭವನಕ್ಕೆ ದೌಡಾಯಿಸಿದ್ದ ಪೊಲೀಸರು, ರಾತ್ರಿಯಿಡೀ ಶೋಧ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ರಾಜಭವನದ ಮೂಲೆಮೂಲೆಯನ್ನೂ ಪರಿಶೀಲಿಸಿದ್ದರು. ಆದರೆ, ಎಲ್ಲಿಯೂ ಬಾಂಬ್ ಪತ್ತೆಯಾಗಲಿಲ್ಲ. ಬಳಿಕ ಇದು ಹುಸಿ ಬೆದರಿಕೆ ಕರೆ ಎಂದು ಗೊತ್ತಾಯಿತು ಎನ್ನಲಾಗಿದೆ.
ಭಾಸ್ಕರ್ ವಿರುದ್ಧ ಅಪರಾಧ ಸಂಚು ಮತ್ತು ಹುಸಿ ಕರೆ ಮಾಡಿ ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿವೆ. ಬಂಧಿತ ಭಾಸ್ಕರ್, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಗ್ರಾಮದವನು. ಬಿ.ಕಾಂ ಪದವೀಧರನಾದ ಆತ ಕರೆ ಮಾಡಿದ ನಂತರ ಬಂಧನ ಭೀತಿಯಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಪರಾರಿಯಾಗಿದ್ದ ಎನ್ನಲಾಗಿದೆ.
ಆತನ ಮೊಬೈಲ್ ಕರೆಗಳ ಜಾಡು ಹಿಡಿದು ಚಿತ್ತೂರಿನಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ವೈಯಕ್ತಿಕ ಕೆಲಸದ ನಿಮಿತ್ತ ಸೋಮವಾರ ಬಸ್ನಲ್ಲಿ ಬೆಂಗಳೂರಿಗೆ ಬಂದಿದ್ದ ಭಾಸ್ಕರ್, ಕಾರ್ಪೊರೇಷನ್ ವೃತ್ತದಲ್ಲಿ ಇಳಿದು ರಾಜಭವನದತ್ತ ನಡೆದು ಹೋಗಿದ್ದ ಎನ್ನಲಾಗಿದೆ.
ಆರೋಪಿಯು ಮಾರ್ಗ ಮಧ್ಯೆ ಗೂಗಲ್ನಲ್ಲಿ ಎನ್ಐಎ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ಹುಡುಕಿ, ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಆತ ಯಾವ ಕಾರಣಕ್ಕೆ ಈ ರೀತಿ ಕರೆ ಮಾಡಿದ ಎಂದು ಪೊಲೀಸ್ ಕೇಳಿದರೆ ಸುಮ್ಮನೆ ಕರೆ ಮಾಡಬೇಕು ಅನ್ನಿಸಿ ಮಾಡಿದೆ ಎಂದಷ್ಟೇ ಹೇಳಿದ್ದಾನೆ. ಇನ್ನು ಬಂಧಿತನ ವಿಚಾರಣೆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ವರದಿ ತಿಳಿಸಿದೆ.