ನ್ಯೂಸ್ ನಾಟೌಟ್: ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ನಿಗೂಢ ಈಮೇಲ್ ಘಟನೆ ಮಾಸುವ ಮುನ್ನ ಇದೀಗ ಬೆಂಗಳೂರಿನ ರಾಜ ಭವನಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ವರದಿ ತಿಳಿಸಿದೆ.
ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ ಕರೆ ಮಾಡಿ ತಿಳಿಸಲಾಗಿದೆ. ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದಾನೆಂದು ತಿಳಿದುಬಂದಿದೆ.
ರಾಜಭವನ ಸ್ಥಳ ವಿಶಾಲವಾದ ಜಾಗವಾಗಿದ್ದು, ಯಾವ ಭಾಗದಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನು ವ್ಯಕ್ತಿ ನೀಡಿಲ್ಲ. ಈ ನಡುವೆ, ರಾಜಭವನಕ್ಕೆ ಯಾವ ನಂಬರ್ನಿಂದ ಕರೆ ಮಾಡಲಾಗಿದೆ. ಕರೆ ಮಾಡಿದ ವ್ಯಕ್ತಿ ಯಾರು ಎಂಬ ವಿಚಾರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎನ್ನಲಾಗಿದೆ.
ಬೆದರಿಕೆ ಕರೆ ಬಂದ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಪೊಲೀಸರು ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ನೊಂದಿಗೆ ಅಲ್ಲಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ರಾಜಭವನಕ್ಕೆ ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಆದರೆ, ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಪೊಲೀಸರು ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು ಎಂಬುದರ ಮಾಹಿತಿ ತಿಳಿದು ಬಂದಿಲ್ಲ. ಸದ್ಯ ವಶದಲ್ಲಿರೋ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.