ನ್ಯೂಸ್ ನಾಟೌಟ್: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಾಂಕ ನಿಗಧಿಯಾಗಿದ್ದು, ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೂ ಮುನ್ನ ವಿಶೇಷ ಸುದ್ದಿಯೊಂದು ಬಂದಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ (Thailand) ವಿಶೇಷ ಮಣ್ಣನ್ನು (Soil) ಕಳುಹಿಸುತ್ತಿದೆ ಎಂದು ವರದಿ ತಿಳಿಸಿದೆ.
ಅಯೋಧ್ಯೆಯಿಂದ 3,500 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್ನ ಅಯುತಾಯ (Ayutthaya) ನಗರದಿಂದ ವಿಶೇಷ ಮಣ್ಣನ್ನು ತರಲಾಗುತ್ತಿದೆ. 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರಕ್ಕೆ ಥೈಲ್ಯಾಂಡ್ ಮಣ್ಣನ್ನು ಕಳುಹಿಸುತ್ತಿದೆ ಎನ್ನಲಾಗಿದೆ.
ಥೈಲ್ಯಾಂಡ್ನ ಸಿಯಾಮ್ ಸಾಮ್ರಾಜ್ಯದಲ್ಲಿರುವ ಅಯುತಾಯಾವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಸಿಯಾಮ್ ಸಾಮ್ರಾಜ್ಯದ ರಾಜಧಾನಿ ಮತ್ತು ಆರ್ಥಿಕ ಕೇಂದ್ರವೂ ಆಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ನಿಂದ ಈ ರೀತಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ನಿಂದ ವಿಶೇಷ ನೀರನ್ನು ಕಳುಹಿಸಲಾಗಿತ್ತು. ಈ ಕ್ರಿಯೆಯು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಅನನ್ಯ ಸಾಂಸ್ಕೃತಿಕ ಸಂಬಂಧಗಳಿಂದ ಹುಟ್ಟಿಕೊಂಡಿದೆ ಎನ್ನಲಾಗಿದೆ.
ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ (WHF) ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ಮಾಹಿತಿ ನೀಡಿದ್ದಾರೆ.
ಅಯುತಾಯ ಥಾಯ್ಲೆಂಡ್ನ ಪ್ರಸಿದ್ಧ ನಗರ. ಅಲ್ಲಿನ ರಾಜರು ‘ರಾಮತಿಬೋಧಿ’ (ಲಾರ್ಡ್ ರಾಮ) ಎಂಬ ಬಿರುದನ್ನು ಹೊಂದಿದ್ದರು. ರಾಮಾಯಣದಲ್ಲಿ ಅಯೋಧ್ಯೆಯನ್ನು ಭಗವಾನ್ ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಅಯುತಾಯವನ್ನು ಜೋಡಿಸಲಾಗಿದೆ. ಕ್ರಿ.ಶ. 1351 ರಿಂದ ಸಯಾಮಿ ಆಡಳಿತಗಾರರ ರಾಜಧಾನಿಯಾಗಿದ್ದ ಅಯುತಾಯವನ್ನು 1767 ರಲ್ಲಿ ಬರ್ಮಾ ಪಡೆಗಳು ಲೂಟಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದವು. ರಾಮಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯ ಥಾಯ್ ಭಾರತದ ರಾಮಾಯಣವೇ ಆಗಿದೆ ಎನ್ನಲಾಗಿದೆ.