ನ್ಯೂಸ್ ನಾಟೌಟ್: ಮಹಿಳೆಯನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿದ್ದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಚಿವರ ಕಾಲಿಗೆ ಬಿದ್ದ ಯುವಕನ ಅಜ್ಜಿ ‘ನಮಗೇನೂ ಗೊತ್ತಿಲ್ಲ, ನಮ್ಮನ್ನು ಕಾಪಾಡಿ’ ಎಂದು ಬೇಡಿಕೊಂಡರು.
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮಕ್ಕೆ ಸೋಮವಾರ ಗೃಹ ಸಚಿವ ಭೇಟಿ ನೀಡಿದರು. ಗ್ರಾಮದ ಯುವಕ ದುಂಡಪ್ಪ (ಅಶೋಕ) ಹಾಗೂ ಪ್ರಿಯಾಂಕ ಪ್ರೀತಿಸಿ, ಭಾನುವಾರ ರಾತ್ರಿ ಓಡಿ ಹೋಗಿದ್ದಾರೆ. ಸಿಟ್ಟಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದರು.
ಈ ಹಿನ್ನೆಲೆಯಲ್ಲಿ ಊರಿಗೆ ಬಂದ ಡಾ.ಪರಮೇಶ್ವರ, ಮಹಿಳೆಯ ಮನೆಗೆ ಆದ ಹಾಗೂ ಹಲ್ಲೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದರು. ಮನೆಯ ಮುಂದೆ ಕಣ್ಣೀರು ಹಾಕುತ್ತ ಕುಳಿತಿದ್ದ ಯುವಕನ ಅಜ್ಜಿಗೆ ಸಮಾಧಾನ ಹೇಳಿದರು.
ಸಚಿವರ ಮುಂದೆ ಗೋಳು ತೋಡಿಕೊಂಡ ಅಜ್ಜಿ, ‘ನಮಗೆ ಈ ವಿಷಯ ಏನೂ ಗೊತ್ತಿಲ್ಲಪ್ಪ. ಮೊಮ್ಮಗ ನಿನ್ನೆ ಮನೆಯಲ್ಲೇ ಮಲಗಿದ್ದ. ಯಾವಾಗ ಆ ಹುಡುಗಿ ಕರೆದಳೋ ಯಾವಾಗ ಹೋದನೋ ಗೊತ್ತಿಲ್ಲ. ಆಕೆಯ ಮನೆಯವರು ಬಂದು ಏಕಾಏಕಿ ಹೊಡೆಯಲು ಶುರು ಮಾಡಿದರು. ನಮಗೆ ಜೀವ ಭಯ ಉಂಟಾಗಿದೆ. ನಮ್ಮನ್ನು ಕಾಪಾಡಿ ತಂದೆ’ ಎನ್ನುತ್ತ ಅಜ್ಜಿ ಪರಮೇಶ್ವರ ಅವರ ಕಾಲಿಗೆ ಬಿದ್ದರು.