ಸುಳ್ಯ: ಆನೆಗಳ ಹಾವಳಿ ಮಿತಿ ಮೀರಿ ಹೋದಂತಿದೆ. ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಆನೆಗಳು ಕಳೆದ ಕೆಲವು ದಿನಗಳಿಂದ ಸುಳ್ಯ ಭಾಗದಲ್ಲೂ ಭಾರಿ ಪ್ರಮಾಣದ ಕೃಷಿ ಚಟುವಟಿಕೆಗಳನ್ನು ನಾಶ ಮಾಡುತ್ತಿವೆ. ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಅರಂಬೂರು ಸರಳಿಕುಂಜದಲ್ಲಿ ಒಂಟಿ ಕಾಡಾನೆಯೊಂದು ಬೆಳ್ಳಂಬೆಳಗ್ಗೆ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬಾಳೆ ಗಿಡವನ್ನು ಹಾನಿಗೊಳಿಸಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ರವರು ಸಂಬಂಧಿಕರಾದ ಸರಳಿಕುಂಜ ತಿಮ್ಮಪ್ಪನ್ ರವರ ಮನೆಯ ಕಡೆಗೆ ಹೋಗುತ್ತಿದ್ದಾಗ ತೋಟದಲ್ಲಿ ಕಾಡಾನೆ ಇರುವುದನ್ನು ಗಮನಿಸಿದರು. ತಕ್ಷಣ ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಫೋಟೋ ತೆಗೆದರು. ಬಳಿಕ ಮನೆಯವರಿಗೆ ವಿಷಯ ತಿಳಿಸಲು ಮನೆಗೆ ಹೋಗಿ ಬರುವಷ್ಟರಲ್ಲಿ ಆನೆ ಮತ್ತೆ ಬಂದ ದಾರಿಯಲ್ಲಿ ಹಿಂತಿರುಗಿದೆ. ತೋಟದಲ್ಲಿ ಬಾಳೆ ಗಿಡವನ್ನು ನಾಶ ಪಡಿಸಿದೆ ಹೊರತು ಬೇರೆ ಯಾವ ಗಿಡ ಮರಗಳನ್ನು ಧ್ವಂಸ ಮಾಡಿಲ್ಲ ಎಂದು ತಿಳಿದು ಬಂದಿದೆ.