ನ್ಯೂಸ್ ನಾಟೌಟ್ : ಗುರಿ ನಿಗದಿತ ಅರೆಕಾಲೀನ ಉದ್ಯೋಗ ವಂಚನೆಯಲ್ಲಿ ಭಾಗಿಯಾಗಿದ್ದ 100 ಅಂತರ್ಜಾಲ ತಾಣಗಳನ್ನು ನಿಷೇಧಿಸಲಾಗಿದೆ ಎಂದು ಬುಧವಾರ(ಡಿ.6) ರಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ಈ ಅಂತರ್ಜಾಲ ತಾಣಗಳು ಅಕ್ರಮ ಹಣ ಹೂಡಿಕೆ ಕುರಿತ ಆರ್ಥಿಕ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದವು ಎಂದು ಅದು ಎಚ್ಚರಿಕೆ ನೀಡಿದೆ.
ಈ ಅಂತರ್ಜಾಲ ತಾಣಗಳನ್ನು ಬೇರೆ ದೇಶಗಳಿಂದ ಸೈಬರ್ ದಾಳಿಕೋರರು ಸಮುದ್ರಾಚೆಗಿನ ದೇಶಗಳಿಂದ ನಿರ್ವಹಿಸುತ್ತಿದ್ದು, ಅವರು ಡಿಜಿಟಲ್ ಜಾಹೀರಾತು, ಚಾಟ್ ಮೆಸೆಂಜರ್ ಗಳು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದ ಸಂಗ್ರಹವಾಗುವ ಮೊತ್ತವನ್ನು ಅಕ್ರಮ ಕಾರ್ಡ್ ಗಳು, ಕ್ರಿಪ್ಟೊಕರೆನ್ಸಿ, ವಿದೇಶಿ ಎಟಿಎಂಗಳ ಮೂಲಕ ಹಿಂಪಡೆಯುವಿಕೆ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ತಂತ್ರಜ್ಞಾನ ಕಂಪನಿಗಳ ಮೂಲಕ ಭಾರತದಿಂದ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ” ಎಂದು ಅದು ಎಚ್ಚರಿಸಿದೆ.
“ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದನ್ವಯ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸೈಬರ್ ಅಪರಾಧಗಳನ್ನು ಮಟ್ಟ ಹಾಕಿ, ಅಂತಹ ದಾಳಿಕೋರರಿಂದ ಜನರನ್ನು ರಕ್ಷಿಸಲು ಬದ್ಧವಾಗಿದೆ” ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.