ನ್ಯೂಸ್ ನಾಟೌಟ್ : ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಖ್ಯಾತಿಯ ಅರ್ಜುನ (Arjuna Elephant) ಆನೆ ದುರಂತ ಅಂತ್ಯವಾಗಿರೋದಕ್ಕೆ ಅರಣ್ಯ ಇಲಾಖೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojari) ಕೆಂಡಾಮಂಡಲರಾಗಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, 60 ವರ್ಷ ಮೀರಿದ ಅನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು ಅಂತ ನಿಯಮವಿದ್ದರೂ ಕೂಡ ಅರ್ಜುನನ್ನು ಬಳಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಅರ್ಜುನ ಆನೆಗೆ 64 ವರ್ಷ. ಕಾಡಾನೆ ಸೆರೆ ಹಿಡಿಯಲು ಆನೆಯನ್ನೇಕೆ ಉಪಯೋಗ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.ಇದೊಂದು ಆತಂಕದ ವಿಚಾರ. ಸರ್ಕಾರ ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಬೇಕು. ಅರವಳಿಕೆ ಪುಂಡಾನೆಗೆ ಬದಲು ಅರ್ಜುನಿಗೆ ಬಿತ್ತು ಅಂತ ಆರೋಪ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಆನೆ ಉಸಿರು ಚೆಲ್ಲಿತ್ತು.
ಹಾಸನದಲ್ಲಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.ಅರ್ಜುನ ಆನೆ ಸಾವಿನ ಬಗ್ಗೆ ಸ್ಥಳದಲ್ಲೇ ಇದ್ದ ಮಾವುತರು ಮತ್ತು ಕಾವಾಡಿಗರು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರವಳಿಕೆ ಕಾಡಾನೆಗೆ ತಾಗುವ ಬದಲು ಅರ್ಜುನನಿಗೆ ತಗಲಿತ್ತು ಎಂದು ಆರೋಪಿಸಿದ್ದಾರೆ.