ನ್ಯೂಸ್ ನಾಟೌಟ್ : ವಿಧಾನಸಭಾ ಚುನಾವಣಾ ಫಲಿತಾಂಶದ ಬಳಕ ಬರೋಬ್ಬರಿ ಆರು ತಿಂಗಳ ನಂತರ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿದೆ. ಆದರೆ, ಬಿ ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಹಾಗೂ ಆರ್ ಅಶೋಕ್ ಗೆ ವಿಪಕ್ಷ ನಾಯಕನ ಸ್ಥಾನ ನೀಡಿದಕ್ಕೆ ಬಿಜೆಪಿಯಲ್ಲಿ ಹಲವರಿಗೆ ಅಸಮಾಧಾನವಿದ್ದು, ಯತ್ನಾಳ್ ಆಗಾಗ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ಹಿರಿಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಬಹಿರಂಗವಾಗಿ ಮಾಜಿ ಸಚಿವ ವಿ ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅಸಮಾಧಾನವನ್ನ ಹೊರ ಹಾಕಿದ್ರು, ಅಲ್ಲದೇ ವಿಪಕ್ಷ ನಾಯಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವವರೆಗೂ ಶಾಸಕಾಂಗ ಸಭೆಗೆ ಹೋಗಲ್ಲ ಎಂದು ಯತ್ನಾಳ್ ಗುಡುಗಿದ್ದು, ಇದೀಗ ಬೆಳಗಾವಿಯನ್ನ ನಡೆಯುತ್ತಿರುವ ಅಧಿವೇಶನದಲ್ಲೇ ಬೇಸರ ಹೊರಹಾಕಿದ್ದಾರೆ.
ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಪಕ್ಷ ನಾಯಕ ಆರ್.ಅಶೋಕ್ ಗೆ ಶುಭ ಕೋರಿಲ್ಲ. ವಿರೋಧ ಪಕ್ಷದ ನಾಯಕನಾಗಿ ಒಕ್ಕಲಿಗ ನಾಯಕ ಹಾಗೂ ಬೆಂಗಳೂರು ಭಾಗದ ಆರ್ ಅಶೋಕ್ ಗೆ ಹೈಕಮಾಂಡ್ ಮಣೆ ಹಾಕಿದ್ದು, ಸದನದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಎಲ್ಲಾ ಸದಸ್ಯರು ಶುಭಕೋರಿದ್ರು. ಈ ವೇಳೆ ನಾನು ಶುಭಕೋರಲ್ಲ ಎಂದು ಹೇಳಿದ್ದ ಯತ್ನಾಳ್ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಎಲ್ಲಿಯವರೆಗೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯತನಕ ನಾನು ಶುಭ ಕೊರುವ ಪ್ರಶ್ನೆಯೇ ಇಲ್ಲ ಎಂದು ಮತ್ತೆ ಅಸಮಾಧಾನವನ್ನ ಹೊರಹಾಕಿದ್ದಾರೆ.
ಅಲ್ಲದೇ ಪ್ರತಿ ಬಾರೀಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಅಲ್ಲಿಯತನಕ ನಾನು ಶುಭ ಕೋರುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.