ನ್ಯೂಸ್ ನಾಟೌಟ್ : ಬೈಕ್ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿಗೆ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವ್ಯಾಚ ಶಬ್ಧಗಳಲ್ಲಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಭಾನುವಾರ (ಡಿಸೆಂಬರ್3) ಮೈಸೂರಿನ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಕಾರಿನಿಂದ ಇಳಿದ ಭವಾನಿ ರೇವಣ್ಣ ಬೈಕ್ ಸವಾರನನ್ನು ಬಾಯಿಗೆ ಬಂದಂತೆ ಬೈದು, ನಿಂದಿಸಿದ್ದಾರೆ ಎನ್ನಲಾಗಿದೆ.
ಭವಾನಿ ಕಾರಿನಿಂದ ಕೆಳಗಿಳಿದು ಬಂದು ಬೈಕ್ ಸವಾರ ಆರೋಗ್ಯ ವಿಚಾರಿಸುವ ಬದಲು ಕೋಟಿ ಬೆಲೆಯ ಕಾರು ಹಾನಿಯಾಯ್ತು ಎಂದು ಕೂಗಾಡಿದ್ದಾರೆ ಎನ್ನಲಾಗಿದೆ. ಹಿಗ್ಗಾಮುಗ್ಗಾ ಬೈದದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ರು ಹಾಕ್ರೋ ಈ ಗಾಡಿನ ಎಂದು ಬೈಕ್ ಸವಾರನಿಗೆ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ವಾಹನದ ಮುಂಭಾಗ ಡ್ಯಾಮೇಜ್ ಆಗಿರುವುದು ನೋಡಿದ ಭವಾನಿ ರೇವಣ್ಣ ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ಬೈಕ್ ಕೀ ಕಿತ್ತುಕೊಂಡರು. ” ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದು ಬೈದಿದ್ದಾರೆ.
ಅಲ್ಲದೇ, ‘ಬಿಟ್ಬಿಡಿ ಅಕ್ಕ’ ಎಂದು ಮಧ್ಯಪ್ರವೇಶಿಸಿದ ಸ್ಥಳೀಯರನ್ನು, ‘ಕೊಡ್ತಿಯಾ ₹ 50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಎಂದು ಸೇರಿದ್ದವರನ್ನು ಕೂಡ ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
” ಅವನು (ಬೈಕ್ ಸವಾರ) ಸತ್ತೋಯ್ತಾನೆ ಅಂತ ಅವನ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?’ ಎಂದೂ ಸ್ಥಳೀಯರ ವಿರುದ್ಧ ಭವಾನಿ ರೇವಣ್ಣ ಕೆಂಡಾಮಂಡಲರಾದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದರು. ಬೈಕ್ ಸವಾರ ಶಿವಣ್ಣ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.