ನ್ಯೂಸ್ ನಾಟೌಟ್ : ಸಿನಿಮಾ ಮತ್ತು ಕಿರುತೆರೆಯ ನಟ-ನಟಿಯರಿಗೆ ಅವಾರ್ಡ್ ಕಾರ್ಯಕ್ರಮಗಳನ್ನು ಹಲವು ಸಂಸ್ಥೆಗಳು ಆಯೋಜಿಸುತ್ತಿರುತ್ತವೆ. ಅಂತೆಯೇ ಗೋವಾದಲ್ಲಿ ನಡೆದ ಸಂತೋಷ್ ಅವಾರ್ಡ್ (Santhosh Awards) ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಹೋಗಿದ್ದ ಕನ್ನಡದ ಹಲವು ಸ್ಟಾರ್ ನಟ-ನಟಿಯರನ್ನು ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹಿರಿಯ ನಟ ರಮೇಶ್ ಅರವಿಂದ್, ನಿರ್ಮಾಪಕಿ ಶೈಲಜಾ ನಾಗ್, ನಟಿ ಸಪ್ತಮಿ ಗೌಡ ಸೇರಿದಂತೆ ಸುಮಾರು 35 ಮಂದಿ ಕನ್ನಡದ ನಟರು ಗೋವಾಕ್ಕೆ ಹೋಗಿದ್ದರು ಎನ್ನಲಾಗಿದೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡದೆ, ಸೂಕ್ತವಾಗಿ ಪ್ರಶಸ್ತಿ ನೀಡದೆ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ.
ಸಂತೋಷ್ ಸುರೇಶ್ ಹಾಗೂ ಟೀಮ್ ಆಯೋಜಿಸಿದ್ದ ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ ಡಿಸೆಂಬರ್2ರಂದು ನಡೆದಿತ್ತು.
ಕನ್ನಡದ ನಟ-ನಟಿಯರು ಸಹ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಎಂದು ವರದಿ ತಿಳಿಸಿದೆ.
ಪತ್ರಕರ್ತೆ ಎ.ಶಾರದಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಕಾರ್ಯಕ್ರಮ ಚೆನ್ನಾಗಿ ಆರಂಭವಾಗಿತ್ತು. ಆದರೆ ಕನ್ನಡ ಚಿತ್ರರಂಗದ ಗಣ್ಯರು ಪ್ರಶಸ್ತಿ ಸ್ವೀಕರಿಸುವ ಹೊತ್ತಿಗೆ ಅಡಚಣೆಗಳು ಶುರುವಾದವು. ಕ್ರಾಂತಿ ಹಾಗೂ ವೇದ ತಂಡಕ್ಕೆ ಒಂದು ಅವಾರ್ಡ್ ನೀಡಲಾಗಿತ್ತು. ರಮೇಶ್ ಅರವಿಂದ್ ಅವರು ಸ್ಟೇಜ್ಗೆ ಬರುತ್ತಿದ್ದಂತೆ ಲೈಟ್ಗಳು ಆಫ್ ಆದವು. ಕಾರ್ಯಕ್ರಮಕ್ಕೆ ಬಂದ ಸ್ಯಾಂಡಲ್ವುಡ್ ಗಣ್ಯರಿಗೆ ಉಳಿಯಲು ಸರಿಯಾಗಿ ವ್ಯವಸ್ಥೆ ಮಾಡಿರಲಿಲ್ಲ ಎಂದು ಟ್ವೀಟ್ ‘ಎಕ್ಸ್’ ನಲ್ಲಿ ವಿವರಿಸಿದ್ದಾರೆ.