ನ್ಯೂಸ್ ನಾಟೌಟ್ : ಕಷ್ಟ-ಸುಖ ಎರಡರಲ್ಲೂ ಗಂಡ-ಹೆಂಡತಿ ಜೊತೆಯಾಗಿದ್ದು ಜೀವನ ನಡೆಸುವುದು ಕ್ರಮ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ,ಒತ್ತಡ, ಏನಾದರೂ ಸಂಕಷ್ಟ ಎದುರಾದ್ರೆ ಸಾಕು ಡಿವೋರ್ಸ್ ಆಗುವವರ ಸಂಖ್ಯೆಯೇ ಅಧಿಕ.ಇಲ್ಲೊಂದೆಡೆ ವಿಚ್ಛೇದನ ಹೊಂದಿದ್ದ ದಂಪತಿ ಆರೋಗ್ಯ ಸಮಸ್ಯೆಯಿಂದ ಒಂದಾದ ಅಪರೂಪದ ಘಟನೆ ವರದಿಯಾಗಿದೆ.
ಹೌದು,ಇಂತಹ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ. ಇಬ್ಬರಿಗೂ ಐದು ವರ್ಷದ ಹಿಂದೆ ವಿಚ್ಛೇದನವಾಗಿತ್ತು. ಈ ವೇಳೆ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಈ ಸುದ್ದಿ ತಿಳಿದು ಪತ್ನಿ ಮರಳಿ ಗಂಡನ ಬಳಿ ಓಡೋಡಿ ಬಂದಿದ್ದಾಳೆ. 2012 ರಲ್ಲಿ ವಿನಯ್ ಜೈಸ್ವಾಲ್ ಮತ್ತು ಪೂಜಾ ಚೌಧರಿ ಅವರ ವಿವಾಹ ನೆರವೇರಿತ್ತು. ಆರಂಭದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದ ದಂಪತಿ ಆ ಬಳಿಕ ಮನಸ್ತಾಪಗಳು ಉಂಟಾಗಿದೆ. ಈ ಕಾರಣದಿಂದ ಇಬ್ಬರು ದೂರವಾಗಲು ನಿರ್ಧರಿಸಿ ವಿಚ್ಛೇದನ ಪಡೆದುಕೊಂಡಿದ್ದರು.
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಕೋರ್ಟ್ ಅಲೆದಾಟ ಶುರುವಾಗಿದೆ. ಇವರ ವಿಚ್ಛೇದನ ಪ್ರಕರಣ ಗಾಜಿಯಾಬಾದ್ನ ಕೌಟುಂಬಿಕ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಾದ – ಪ್ರತಿವಾದದ ಬಳಿಕ 2018 ರಲ್ಲಿ ಬೇರ್ಪಟ್ಟರು.ಇದಾದ ಬಳಿಕ ಇಬ್ಬರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇದೇ ವರ್ಷದ ಆಗಸ್ಟ್ ನಲ್ಲಿ ಮಾಜಿ ಪತಿ ವಿನಯ್ ಅವರಿಗೆ ಹೃದಯಾಘಾತವಾಗಿದೆ. ಇದರಿಂದ ವಿನಯ್ ಓಪನ್ ಸರ್ಜರಿಗೆ ಒಳಗಾಗಬೇಕಾಗುತ್ತದೆ. ಈ ಸುದ್ದಿ ಕೇಳಿ ಪೂಜಾ ಅವರಿಗೆ ಆತಂಕವಾಗಿದೆ. ಆಸ್ಪತ್ರೆಗೆ ತೆರಳಿ ಮಾಜಿ ಪತಿಯ ಜೊತೆ ಒಂದಷ್ಟು ಸಮಯವನ್ನು ಪೂಜಾ ಕಳೆದಿದ್ದಾರೆ.
ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ, ಅವರ ನಡುವಿನ ಪ್ರೀತಿ ಮತ್ತೆ ಚಿಗುರಿದೆ. ತಮ್ಮ ನಡುವಿನ ಮನಸ್ತಾಪಗಳನ್ನು ಮರೆತು ಮತ್ತೆ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದಾರೆ.ನವೆಂಬರ್ 23 ರಂದು ವಿನಯ್ ಮತ್ತು ಪೂಜಾ ಪರಸ್ಪರರ ಕುಟುಂಬದ ಸಮ್ಮುಖದಲ್ಲಿ ಮತ್ತೆ ವಿವಾಹವಾಗಿದ್ದಾರೆ. ಗಾಜಿಯಾಬಾದ್ನ ಕವಿನಗರದಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಿತು.ವಿನಯ್ ಜೈಸ್ವಾಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಮೂಲತಃ ಪಾಟ್ನಾ ನಿವಾಸಿಯಾಗಿರುವ ಪೂಜಾ ಚೌಧರಿ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.