ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ನಿಂತಿದ್ದ ಕಾರಿನಲ್ಲಿ ವೈದ್ಯರೊಬ್ಬರು ಶವವಾಗಿ (Doctor found dead) ಪತ್ತೆಯಾಗಿರುವ ಘಟನೆಗೆ ಸಂಬಂಧ ಪಟ್ಟ ಪ್ರಕರಣ ತಿರುವು ಪಡೆದುಕೊಂಡಿದೆ.ಇದು ಆತ್ಮಹತ್ಯೆಯೋ ಅಥವಾ ಹೃದಯಾಘಾತವೋ ಅನ್ನೋದರ ಬಗ್ಗೆ ಅನುಮಾನಗಳು ದಟ್ಟವಾಗಿ ಮೂಡಿವೆ.
ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ್ (47) ಅವರೇ ಮೃತಪಟ್ಟ ವೈದ್ಯ. ಇಡೀ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಭ್ರೂಣ ಹತ್ಯೆ (Gender Detection) ಪ್ರಕರಣದಲ್ಲಿ (feticide case) ಇವರ ಹೆಸರು ತಳುಕು ಹಾಕಿಕೊಂಡಿದ್ದು, ಹೀಗಾಗಿ ಅವರು ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೇ (Suicide Case) ಎಂಬ ಪ್ರಶ್ನೆಯೂ ಉದ್ಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಂಪು ಕಾರೊಂದರಲ್ಲಿ ಸತೀಶ್ ಮೃತದೇಹವು ಪತ್ತೆಯಾದ ಹಿನ್ನಲೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಡಾ ಸತೀಶ್ ಅವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದರು.ಹೀಗೆ ಡ್ರೈವರ್ ಸೀಟಿನಲ್ಲೇ ಕುಳಿತಿರುವ ಸತೀಶ್ ಅವರಿಗೆ ಹೃದಯಾಘಾತವಾಗಿದೆಯೋ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು,ಇದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಸತೀಶ್ ಅವರು ಮೈಸೂರಿನ ಕೊಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯನಾಗಿ ಕೆಲಸ ಮಾಡುತ್ತಿದ್ದರು. ಅವರ ಹೆಸರು ಇತ್ತೀಚೆಗೆ ಬೆಳಕಿಗೆ ಬಂದ 1500 ಭ್ರೂಣ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು.ಈ ಪ್ರಕರಣದಲ್ಲಿ ಹಲವಾರು ವೈದ್ಯರು, ಲ್ಯಾಬ್ ಟೆಕ್ನೀಷಿಯನ್ಗಳು ಮತ್ತು ಏಜೆಂಟರನ್ನು ಈಗಾಗಲೇ ಬಂಧಿಸಲಾಗಿದೆ. ಅವರು ವಿಚಾರಣೆಯ ಸಂದರ್ಭದಲ್ಲಿ ಸತೀಶ್ ಅವರ ಹೆಸರು ಕೂಡ ಹೇಳಿದ್ದರು ಎನ್ನಲಾಗಿದೆ.ಹೀಗಾಗಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ಅವರು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಸದ್ಯ ರಾಜ್ಯ ಸರ್ಕಾರ ಈಗ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಹೀಗಾಗಿ ಸಿಕ್ಕಿಬಿಳುವ ಭಯದಿಂದ ವೈದ್ಯ ಸತೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.ಮಂಡ್ಯದ ಕೊಣಸೂರು ಆಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಕೂಡ ಸ್ಥಳೀಯರನ್ನು ವಿಚಾರಿಸಿದಾಗ ಡಾ. ಸತೀಶ್ ಹೆಸರು ಹೇಳಿದ್ದರು ಎನ್ನಲಾಗಿದೆ.ಇವೆಲ್ಲದರ ನಿಜಾಂಶ ಏನು ಎಂದು ತಿಳಿಬೇಕಾದರೆ ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ.ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಜಾಲ ಅತ್ಯಂತ ಭಯಾನಕವಾಗಿದ್ದು,ಮೊದಲು ಈ ಪ್ರಕರಣ ಬೆಂಗಳೂರಿನ ಬಯ್ಯಪ್ಪನಹಳ್ಳಿಯಲ್ಲಿ ಪತ್ತೆಯಾಯಿತು.ಇದೀಗ ಅದು ಮಂಡ್ಯ ಮತ್ತು ಮೈಸೂರಿನ ಕಡೆಗೆ ವಿಸ್ತರಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವುದು ಬೆಳಕಿಗೂ ಬರುತ್ತಿದೆ.