ನ್ಯೂಸ್ ನಾಟೌಟ್: ಹಣದಾಸೆಗೆ ಈ ಜಗತ್ತಿನಲ್ಲಿ ಏನು ಬೇಕಾದರೂ ನಡೆಯುತ್ತೆ. ಯಾರು ಹಾಳಾದರೇನು ತಾನು ಮಾತ್ರ ಚೆನ್ನಾಗಿರಬೇಕು ಅನ್ನುವ ಮನುಷ್ಯನ ಸ್ವಾರ್ಥ ತುಂಬಿದ ಬುದ್ಧಿಯಿಂದ ಜಗತ್ತಿನಲ್ಲಿ ಹಲವು ಅನಾಹುತಗಳು ಸಂಭವಿಸುತ್ತಿವೆ. ಇದೀಗ ಅಂತಹ ಅನಾಹುತಗಳ ಸಾಲಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ.
ವ್ಯಕ್ತಿಯೊಬ್ಬ, ಅವಧಿ ಮೀರಿದ ಮಕ್ಕಳ ತಿಂಡಿ ಪ್ಯಾಕೇಟ್ಗಳಿಗೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಂಗಳೂರು (Bengaluru) ಉತ್ತರ ತಾಲೂಕಿನ ಗೋಪಾಲಪುರ ವೇರ್ಹೌಸ್ನಲ್ಲಿ ಬೆಳಕಿಗೆ ಬಂದಿದೆ. ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಕೋರಮಂಗಲದ ರೋಹಿತ್ ಫರ್ನಾಂಡಿಸ್ ಎಂಬಾತ ಗ್ರಾಮದ ನಾರಯಣಪ್ಪ ಅವರಿಂದ ಆರು ತಿಂಗಳ ಹಿಂದೆ ಗೋಡೌನ್ ಅನ್ನು ಬಾಡಿಗೆಗೆ ಪಡೆದಿದ್ದನು. ಹಣದ ದುರಾಸೆಗೆ ಬಿದ್ದಿದ್ದ ರೋಹಿತ್ ಫರ್ನಾಂಡಿಸ್, ಕಂಪನಿಯ ಯಾವುದೇ ನಾಮಪಾಲಕ ಹಾಕದೆ ಬೆಂಗಳೂರಿನಿಂದ ಅವಧಿ ಮೀರಿದ ಆಹಾರ ಪ್ಯಾಕೇಟ್ ತರಿಸಿಕೊಂಡು ಹೊಸ ಅವಧಿ ದಿನಾಂಕ ಮುದ್ರಿಸುತ್ತಿದ್ದನು.
ಥಿನ್ನರ್ ಹಾಗೂ ಕೆಮಿಕಲ್ ಸಹಾಯದಿಂದ ಹೊಸ ಎಕ್ಸ್ಪೈರ್ ಡೇಟ್ ಮುದ್ರಣ ಮಾಡಲಾಗುತ್ತಿತ್ತು. ಈ ವಿಚಾರ ಸ್ಥಳೀಯರಿಗೆ ತಿಳಿದು ಮಾಹಿತಿ ಬಹಿರಂಗವಾಗಿದೆ. ತಕ್ಷಣ ದಾಳಿ ನಡೆಸಿದ ಮಾದನಾಯಕನಹಳ್ಳಿ ಠಾಣಾ ಪೊಲೀಸರು, ಮ್ಯಾನೇಜರ್ ವೆಂಕಟೇಶ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಕೋಟ್ಯಂತರ ಮೌಲ್ಯದ ಆಹಾರ ಸಾಮಾಗ್ರಿಗಳು, ಧಿನ್ನರ್ ಹಾಗೂ ಕೆಮಿಕಲ್ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ 15 ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.