ನ್ಯೂಸ್ ನಾಟೌಟ್: ಇತ್ತೀಚೆಗೆ ಧರ್ಮಗಳ ಹೆಸರಿನಲ್ಲಿ ಹಲ್ಲೆ – ಕಿರುಕುಳಗಳು ನಡೆಯುತ್ತಿದ್ದು, ಯುವಕರ ತಂಡವೊಂದು ಮುಸ್ಲಿಂ ಅಂಧ ವ್ಯಕ್ತಿಯನ್ನು ಅಪಹರಿಸಿ ಜೈ ಶ್ರೀ ರಾಮ್ (Jai Shree Ram) ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದೆ ಎಂದು ಆರೋಪಿಸಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿಯ ಮಹಿಬೂಬ ನಗರದ ನಿವಾಸಿ ಹುಸೇನಸಾಬ ಎಂಬ ವೃದ್ಧನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ನವೆಂಬರ್ 25ರಂದು ಸಂಜೆ ಈ ಘಟನೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಹುಸೇನ ಸಾಬ ಎಂಬವರಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿ ಇಲ್ಲ. ಅಂಧರಾಗಿರುವುದರಿಂದ ನ. 25ರಂದು ಕಷ್ಟಪಟ್ಟು ವಾಹನಗಳನ್ನು ಬಳಸಿ ಪೇಟೆ ಕಡೆಗೆ ಬಂದಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಕೆಲವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಅವರನ್ನು ಅಪಹರಿಸಿ ನಗರದ ಹೊರವಲಯದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅವರ ಗಡ್ಡಕ್ಕೆ ಬೆಂಕಿ ಹಚ್ಚಲಾಗಿದೆ. ಆದರೆ, ಅವರು ಕೂಡಲೇ ಅದನ್ನು ನಂದಿಸಿಕೊಂಡಿದ್ದಾರೆ. ಬಳಿಕ ಹಲ್ಲೆ ಮಾಡಲಾಗಿದೆ. ಹುಸೇನ ಸಾಬ ಎಂಬವರ ಬೆನ್ನಿಗೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಆವತ್ತು ರಾತ್ರಿ ಇಡೀ ಹುಸೇನಸಾಬ ಆ ಗುಡ್ಡದಲ್ಲೇ ಇದ್ದರು ಎನ್ನಲಾಗಿದೆ. ಬೆಳಗ್ಗೆ ಕುರಿ ಕಾಯುವವರು ಬಂದು ನೋಡಿದಾಗ ಇವರು ಬಿದ್ದುಕೊಂಡಿರುವುದು ಕಂಡಿದೆ. ಅವರು ಹುಸೇನ್ ಸಾಬ್ ಅವರನ್ನು ಮನೆಗೆ ಸೇರಿಸಿದ್ದಾರೆ. ಮನೆಯಲ್ಲಿ ಹೀಗೆಲ್ಲ ನಡೆದಿದೆ ಎಂದು ಹೇಳಿದ ಬಳಿಕ ಈಗ ಗಂಗಾವತಿ ನಗರ ಠಾಣೆಗೆ ದೂರು ನೀಡಲಾಗಿದೆ ಮತ್ತು ಜೈ ಶ್ರೀರಾಮ್ ಹೇಳುವಂತೆ ಪೀಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿ ತಿಳಿಸಿದೆ.