ನ್ಯೂಸ್ ನಾಟೌಟ್: ಬಸ್ನಲ್ಲಿ ಸರಗಳ್ಳತನ, ಮಹಳೆಯರಿಗೆ ತೊಂದರೆ ನೀಡುವಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ(BMTC) ಬಸ್ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದು, ಐದು ಸಾವಿರ ಬಸ್ಗಳಿಗೆ ಅಳವಡಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಿಸಿ ಟಿವಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಲಾಗಿದ್ದು, ಬಿಎಂಟಿಸಿ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಒತ್ತಿದರೆ ಸಿಸಿ ಟಿವಿ ಅಲರ್ಟ್ ಮತ್ತು ಸೈರನ್ ಆನ್ ಆಗುತ್ತದೆ. ಬಟನ್ ಪ್ರೆಸ್ ಆಗುತ್ತಿದ್ದಂತೆ ಬಿಎಂಟಿಸಿಯ ಕಂಟ್ರೋಲ್ ರೂಮ್ಗೆ ಬಸ್ನ ಸಂಪೂರ್ಣ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ, ಕಂಡಕ್ಟರ್ ಮತ್ತು ಡ್ರೈವರ್ಗೆ ಕಂಟ್ರೋಲ್ ರೂಮ್ನಿಂದ ಕರೆ ಬರುತ್ತದೆ.
ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಬಸ್ ಅನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ. ಯಾರಾದರೂ ಮಹಿಳೆಯರಿಗೆ ತೊಂದರೆ ನೀಡಿದ್ದ ಬಗ್ಗೆ ಮಾಹಿತಿ ನೀಡಿದರೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವರದಿ ತಿಳಿಸಿದೆ.
ಪ್ರಕರಣದ ನಂತರ ಬಿಎಂಟಿಸಿ ನಮ್ಮ ಬಿಎಂಟಿಸಿ ಆ್ಯಪ್ ಬಿಡುಗಡೆ ಮಾಡಿದ್ದು, ಆ್ಯಪ್ನಲ್ಲಿ ಸ್ಪೆಷಲ್ ಫೀಚರ್ ಲಾಂಚ್ ಮಾಡಲಾಗಿದೆ. ಎಸ್ಓಎಸ್ ಬಟನ್ ಪ್ರೆಸ್ ಮಾಡಿದರೆ ಬಿಎಂಟಿಸಿ ಕಾಲ್ ಸೆಂಟರ್ನಿಂದ ಪ್ರಯಾಣಿಕರ ಮೊಬೈಲ್ ನಂಬರ್ಗೆ ಕರೆ ಬರುತ್ತದೆ. ಈ ವೇಳೆ ಸಮಸ್ಯೆ ಹೇಳಿಕೊಳ್ಳಬಹುದು. ನಂತರ ಸ್ಥಳಕ್ಕೆ ಪಿಂಕ್ ಮಹಿಳಾ ಸಾರಥಿ ವಾಹನವನ್ನು ಕಳಿಸಲಾಗುತ್ತದೆ ಎಂದು ನಿಗಮ ತಿಳಿಸಿದೆ.