ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್ಐಎ ಅಧಿಕಾರಿಗಳು ಇಂದು ಮತ್ತೆ ದಾಳಿ ನಡೆಸಿದ್ದು ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಬಂಧಿಸಲಾಗಿದೆ.
ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ. ಬಾಷಾ ಅವರ ಮನೆಗೆ ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದರು. ಇಂದು ಬೆಳಗ್ಗೆ ಮತ್ತೆ ಅದೇ ಮನೆಗೆ ಎನ್ಐಎ ಡಿಎಸ್ಪಿ ಸಹಾಯಕ ತನಿಖಾಧಿಕಾರಿ ಕ್ರಿಶ ಕುಮಾರ್ ನೇತೃತ್ವದ ಪಿಐ ಅಜಯ್ ಸಿಂಗ್, ಮೋನಿಕಾ ಧಿಕ್ವಾಲ್ ಅವರ ತಂಡ ಆಗಮಿಸಿದ್ದು, ದೀಪ್ತಿ ಮರಿಯಂಳನ್ನು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಯಾರಿವಳು ಮಹಿಳೆ?
ಮೂಲತಃ ಕೊಡಗು ಮೂಲದ ದೀಪ್ತಿ ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯಲ್ಲಿ ಬಿಡಿಎಸ್ ಕಲಿಯುತ್ತಿದ್ದಾಗ ಬಿಎಂ ಬಾಷಾ ಪುತ್ರ ಅನಾಸ್ ಪರಿಚಯವಾಗಿ ನಂತರ ಪ್ರೇಮ ವಿವಾಹವಾಗಿದ್ದಳು. ಆದರೆ ನಂತರ ಕಟ್ಟರ್ ಮುಸ್ಲಿಂ ಆಗಿ ಪರಿವರ್ತನೆಯಾಗಿದ್ದ ದೀಪ್ತಿ ತನ್ನ ಹೆಸರನ್ನು ಮರಿಯಂ ಎಂದು ಬದಲಿಸಿಕೊಂಡಿದ್ದಳು.
ಇದೇ ಮರಿಯಂ ಕುಖ್ಯಾತ ಜಿಹಾದಿ ಗುಂಪು ಐಸಿಸ್ ನ ಸಂಪರ್ಕ ಪಡೆದಿದ್ದು ಮಂಗಳೂರಿನಲ್ಲಿದ್ದೇ ಜಮ್ಮು ಕಾಶ್ಮೀರದ ಲಿಂಕ್ ಹೊಂದಿದ್ದಳು ಎನ್ನಲಾಗಿತ್ತು. ಐಸಿಸ್ ನೆಟ್ವರ್ಕ್ ಗೆ ಯುವಕರನ್ನು ಸೇರಿಸುವ ಜಾಲದಲ್ಲಿ ಈಕೆಯೂ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದರು. ಆದರೆ ಇದೀಗ ಎನ್ಐಎ ಅಧಿಕಾರಿಗಳ ಅನುಮಾನ ನಿಜವಾಗಿದೆ. ಬಲವಾದ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿದ್ದಾರೆ.