ನ್ಯೂಸ್ ನಾಟೌಟ್: ಬೈಕ್ ಪಾರ್ಕ್ ಮಾಡಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರ ಬೈಕ್ ಅನ್ನು ಕಳ್ಳರು ಕದ್ದು ಪರಾರಿಯಾಗಿರುವ ಕುರಿತು ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಕುರುಬರ ಬೂದಿಹಾಳ ಗ್ರಾಮ ಚಿಕ್ಕಮಗಳೂರು ನಿವಾಸಿ ಕೆ ಟಿ ಕೃಷ್ಣಶೆಟ್ಟಿ (54) ಎಂಬವರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಸ್ನಾನಕ್ಕಿಳಿದಿದ್ದಾರೆ. ಅವರು ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಮೋಟಾರ್ ಸೈಕಲ್ ನಲ್ಲಿ ಒಣಮೆಣಸು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು.
ಇಡೀ ಜೀವನಕ್ಕೆ ಈ ಬೈಕ್ ಅವರಿಗೆ ಆಧಾರವಾಗಿತ್ತು. ಆ ಬೈಕ್ ನಲ್ಲಿ ವ್ಯಾಪಾರ ಮುಗಿಸಿ ತೆರಳುತ್ತಿದ್ದವರು ನೇತ್ರಾವತಿ ನದಿಯಲ್ಲಿ ಬುಧವಾರ (ನ.29) ಸ್ನಾನಕ್ಕೆಂದು ಇಳಿದಿದ್ದಾರೆ. ಬೈಕ್ ಪಾರ್ಕ್ ಮಾಡಿ ತೆರಳಿದವರು ಒಂದೆರಡು ಮುಳುಗು ಹಾಕಿ ಎದ್ದು ವಾಪಸ್ ಬಂದಾಗ ಬೈಕ್ ಪಾರ್ಕ್ ಮಾಡಿದ ಜಾಗದಲ್ಲಿ ಇರಲಿಲ್ಲ. ತಕ್ಷಣ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದು ಹೋದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ 30,000/- ಆಗಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 96/2023 ಕಲಂ: 379 ಐ ಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.