ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಒಂದೆಡೆಯಾದ್ರೆ ಇದೀಗ ಸಣ್ಣ ಮಕ್ಕಳು ಕೂಡ ಹೃದಯ ಸ್ತಂಭನಕ್ಕೆ ಒಳಗಾಗಿ ಪ್ರಾಣವನ್ನು ಕಳೆದು ಕೊಳ್ಳುತ್ತಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.
ಹೌದು,6 ವರ್ಷದ ಬಾಲಕನೊಬ್ಬ ಹೃದಯಸ್ತಂಭನದಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ದುರಂತ ಅಂತ್ಯ ಕಂಡಿದ್ದಾನೆ.ವಿಹಾನ್ ಜೈನ್ (6 ವರ್ಷ) ಮೃತ ಬಾಲಕನೆಂದು ಗುರುತಿಸಲಾಗಿದೆ.ಮಧ್ಯಪ್ರದೇಶದ ಇಂದೋರ್ನಲ್ಲಿ ನೆಲೆಸಿರುವ ಉದ್ಯಮಿ ರಾಹುಲ್ ಜೈನ್ ಅವರ ಏಕೈಕ ಪುತ್ರನಾಗಿರುವ ಈತ ಹೃದಯಸ್ತಂಭನದಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ.ಈ ಪುಟ್ಟ ಬಾಲಕ ವಿಹಾನ್ ಜೈನ್ ಒಂದನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಇದ್ದಕ್ಕಿದ್ದಂತೆ ಅಸ್ವಸ್ಥನಾದ ಈತನ ಮೈ ಬಿಸಿಯಾಗತೊಡಗಿತು.ಆದರೆ ಮಗು ಜ್ವರದಿಂದದಿಂದ ಬಳಲುತ್ತಿದೆಯೇನೋ ಎಂದು ಮನೆಯವರು ಭಾವಿಸಿದ್ದರು.ಮನೆಯಲ್ಲಿದ್ದ ಥರ್ಮಾಮೀಟರ್ನಲ್ಲಿ ಜ್ವರ ತಪಾಸಣೆ ಮಾಡಲಾಯಿತು.ಆದರೆ ಥರ್ಮಾಮೀಟರ್ನಲ್ಲಿನ ತಾಪಮಾನವು ಹುಡುಗನಿಗೆ ಜ್ವರ ಎಂದು ತೋರಿಸಲಿಲ್ಲ.
ತಂದೆ-ತಾಯಿ ಬಾಲಕನ ದೇಹ ತುಂಬಾ ಬಿಸಿಯಾಗಿದ್ದರಿಂದ ಜ್ವರ ಬಂದಿರಬಹುದು ಎಂದು ಕುಟುಂಬಸ್ಥರು ಆರಂಭದಲ್ಲಿ ಭಾವಿಸಿದ್ದರು. ಬಾಲಕನ ದೇಹ ಬಿಸಿ ಇದ್ದರಿಂದ ಪೋಷಕರು ಆತನನ್ನು ಇಂದೋರ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಬಾಲಕನ ಸ್ಥಿತಿ ಸುಧಾರಿಸಿದೆ. ನಂತರ ಕುಟುಂಬ ಸದಸ್ಯರು ಯಾವುದೋ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಬೇಕಾಯಿತು. ಅಲ್ಲಿ ಮಗು ವಿಹಾನ್ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿತು ಎಂದು ಹೇಳಲಾಗಿದೆ.ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಾಗ ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. ಶನಿವಾರ (ನವೆಂಬರ್ 27) ಚಿಕಿತ್ಸೆ ನೀಡುತ್ತಿರುವಾಗ ಮಗುವಿನ ಹೃದಯ ಇದ್ದಕ್ಕಿದ್ದಂತೆ ನಿಂತುಹೋಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಾಲಕನಿಗೆ ಹೃದಯಸ್ತಂಭನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ರಕ್ತ ಪರೀಕ್ಷೆಯಲ್ಲಿ ಮಯೋಕಾರ್ಡಿಟಿಸ್ ಎಂಬ ವೈರಸ್ ಪತ್ತೆಯಾಗಿದೆ. ಈ ವೈರಸ್ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ವೈರಸ್ ಹೃದಯ ಸ್ನಾಯುಗಳಲ್ಲಿ ಊತವನ್ನು ಉಂಟುಮಾಡುತ್ತದೆ, ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.