ನ್ಯೂಸ್ ನಾಟೌಟ್: ಮಗಳ ಕತ್ತು ಸೀಳಿ ಕೊಲೆ ಮಾಡಿ, ತಂದೆಯೊಬ್ಬ ಆಕೆಯ ದೇಹಕ್ಕೆ ಬೆಂಕಿ ಇಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವ್ಯಕ್ತಿಯ ಮನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು, ತನ್ನ ಕುಟುಂಬದಲ್ಲಿ ಆಗುತ್ತಿರುವ ಭಿನ್ನಾಭಿಪ್ರಾಯ ಮತ್ತು ಜಗಳಕ್ಕೆ ತನ್ನ ಹಿರಿಯ ಮಗಳು ಕಾರಣ ಎಂದು ಆತ ನಂಬಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ. ನಿರ್ಮಾ ಸೋಮವಾರ(ನ.27) ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಆಕೆಯ ತಂದೆ ಭೇಟಿಯಾಗಿದ್ದರು.
ನಂತರ ಸಂತ್ರಸ್ತೆ ಮತ್ತು ಆಕೆಯ ತಂಗಿಯನ್ನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಶಿವಲಾಲ್ ಮೇಘವಾಲ್ 12 ವರ್ಷಗಳಿಂದ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತನ ಪತ್ನಿ ಮತ್ತು ಮಕ್ಕಳು ಗುಜರಾತ್ನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಮಾಳೊಂದಿಗೆ ಏಕಾಂತ ಸ್ಥಳಕ್ಕೆ ಹೋದಾಗ ಕಿರಿಯ ಮಗಳಿಗೆ ಅಲ್ಲೇ ಕಾಯುವಂತೆ ಹೇಳಿ, ಮಗಳ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಮೇಘವಾಲ್ ಹಿಂದಿರುಗಿದಾಗ ಆತನ ಕೈಯಲ್ಲಿ ರಕ್ತದ ಕಲೆ ಇರುವುದನ್ನು ಮತ್ತೊಬ್ಬ ಮಗಳು ನೋಡಿದ್ದಾಳೆ. ಬಳಿಕ ಅರ್ಧ ಸುಟ್ಟ ದೇಹವನ್ನು ಕೂಡ ನೋಡಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗೆ ಶಿಕ್ಷಿ ವಿಧಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.