ನ್ಯೂಸ್ ನಾಟೌಟ್ : ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕರಾವಳಿ ಜಿಲ್ಲೆಯ ಉತ್ಸವವಾದ ಕಂಬಳವನ್ನು ಬೆಂಗಳೂರಿನಲ್ಲಿ ಅದ್ದೂರಿಯಿಂದ ಆಯೋಜನೆ ಮಾಡಲಾಗುತ್ತಿದೆ. ಆದರೆ, ಈ ವೇಳೆ ಕಂಬಳ ಆಯೋಜನೆ ಮಾಡುವ ಆಯೋಜಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಗ್ ಶಾಕ್ವೊಂದನ್ನು ನೀಡಿದೆ.
ಹೌದು,ಕರಾವಳಿಯ ಕಂಬಳವನ್ನು ರಾಜ್ಯದ ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗುತ್ತಿದೆ. ಕಳೆದೊಂದು ವಾರದಿಂದ ಈ ಕಂಬಳಕ್ಕೆ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಇಂದು ಕಂಬಳವನ್ನು ಆರಂಭಿಸಲಾಗಿದೆ. ಆದರೆ, ಇಂದು ಕಂಬಳ ಆಯೋಜನೆ ಮಾಡಿದವರು ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ, ಅರಮನೆ ಮೈದಾನ ಹಾಗೂ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರದರ್ಶನಾ ಫಲಕಗಳನ್ನು ಅಳವಡಿಕೆ ಮಾಡಿ ಜಾಹೀರಾತು ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಕಂಬಳದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಎಲ್ಲಿ ನೋಡಿದರೂ ಕಂಬಳದ್ದೇ ಸದ್ದು ಕೇಳಿ ಬರುತ್ತಿದೆ. ಸಮಿತಿ ವತಿಯಿಂದ ಒಟ್ಟು 200ಕ್ಕೂ ಹೆಚ್ಚು ಕೋಣಗಳ ಸ್ಪರ್ಧೆಯನ್ನು ಒಳಗೊಂಡಂತೆ ಕಂಬಳ ಉತ್ಸವವನ್ನು ಆಯೋಜನೆ ಮಾಡಲಾಗಿದೆ. ಇನ್ನು ಜನರನ್ನು ಆಕರ್ಷಣೆ ಮಾಡಲು ಅರಮನೆ ಮೈದಾನದ ಮುಂದೆ ಫ್ಲೆಕ್ಸ್ ಬ್ಯಾನರ್ ಹಾಕಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧವಿದ್ದರೂ, ಇವುಗಳನ್ನು ಅಳವಡಿಕೆ ಮಾಡಿ ಜಾಹೀರಾತು ಪ್ರದರ್ಶನ ಮಾಡಿದ್ದಕ್ಕೆ ಸದಾಶಿವನಗರ ಠಾಣೆಗೆ ಬಿಬಿಎಂಪಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರಮನೆ ಮೈದಾನದ ಸುತ್ತಮುತ್ತ ಕಂಬಳ ಉತ್ಸವ ಸಮಿತಿಯಿಂದ ಅಳವಡಿಕೆ ಮಾಡಲಾಗಿದ್ದ ಬ್ಯಾನರ್ ತೆರವು ಮಾಡಲಾಗಿದೆ.ಇತ್ತ ಕಂಬಳ ಆಯೋಜನೆ ಮಾಡಿರುವುದಕ್ಕೆ ಶುಭಾಶಯ ಕೋರಿ ವಿವಿಧ ನಾಯಕರು ಬ್ಯಾನರ್ ಹಾಗೂ ಬಂಟಿಂಗ್ಸ್ಗಳನ್ನು ಅಳವಡಿಕೆ ಮಾಡಿದ್ದರು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ 50 ಸಾವಿರ ದಂಡ ವಿಧಿಸಿದ್ದಾರೆ.