ನ್ಯೂಸ್ ನಾಟೌಟ್: ಮಲಗುವ ಕೋಣೆಗೆ ವಿಷಪೂರಿತ ಹಾವನ್ನು ಬಿಟ್ಟು ತನ್ನ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಕೊಂದ ಆರೋಪದಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಒಡಿಶಾದ ಗಂಜಂ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.
ಬೆಹ್ರಾಂಪುರದಿಂದ 60 ಕಿಮೀ ದೂರದಲ್ಲಿರುವ ಕಬಿಸೂರ್ಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಯಿಗಾಂವ್ ಗ್ರಾಮದಲ್ಲಿ ಒಂದೂವರೆ ತಿಂಗಳಿಗಿಂತ ಹಿಂದೆ ಈ ಘಟನೆ ನಡೆದಿದ್ದು, ಇದು ಉದ್ದೇಶ ಪೂರ್ವಕ ಕೃತ್ಯವೆಂದು ಈಗ ಬೆಳಕಿಗೆ ಬಂದಿದೆ.
ಆರೋಪಿಯನ್ನು 23 ವರ್ಷದ ಕೆ. ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನಿಗೆ ತನ್ನ ಪತ್ನಿ ಕೆ.ಬಸಂತಿ ಪಾತ್ರಾ(23)ರೊಂದಿಗೆ ಮನಸ್ತಾಪವಿತ್ತು ಎಂದು ಹೇಳಲಾಗಿದೆ. 2020ರಲ್ಲಿ ವಿವಾಹವಾಗಿದ್ದ ಈ ದಂಪತಿಗಳಿಗೆ ದೇಬಸ್ಮಿತ ಎಂಬ ಎರಡು ವರ್ಷದ ಪುತ್ರಿಯಿದ್ದಳು ಎಂದು ವರದಿ ತಿಳಿಸಿದೆ.
ಹಾವಾಡಿಗನಿಗೆ ಧಾರ್ಮಿಕ ಕೆಲಸಕ್ಕಾಗಿ ಹಾವಿನ ಅಗತ್ಯವಿದೆ ಎಂದು ಸುಳ್ಳು ಹೇಳಿ ಆರೋಪಿಯು ಆತನಿಂದ ಹಾವನ್ನು ಖರೀದಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 6ರಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ನಾಗರಹಾವನ್ನು ತಂದಿರುವ ಆರೋಪಿಯು ತನ್ನ ಪುತ್ರಿಯೊಂದಿಗೆ ಮಲಗಿದ್ದ ಪತ್ನಿಯ ಕೋಣೆಗೆ ಆ ಹಾವನ್ನು ಬಿಟ್ಟಿದ್ದಾನೆ. ಮರು ದಿನ ಬೆಳಗ್ಗೆ ಹಾವು ಕಡಿತದಿಂದ ಇಬ್ಬರೂ ಕೊನೆಯುಸಿರೆಳೆದಿದ್ದು ಬೆಳಕಿಗೆ ಬಂದಿದೆ.
ಆ ರಾತ್ರಿ ಆರೋಪಿಯು ಮತ್ತೊಂದು ಕೋಣೆಯಲ್ಲಿ ನಿದ್ರಿಸಿದ್ದಾನೆ ಎಂದು ಹೇಳಲಾಗಿದ್ದು, ಆರಂಭದಲ್ಲಿ ಪೊಲೀಸರು ಅಸಹಜ ಮರ* ಣ ಪ್ರಕರಣ ದಾಖಲಿಸಿಕೊಂಡಿದ್ದರಾದರೂ, ಆತನ ಮಾವ ತನ್ನ ಪುತ್ರಿ ಹಾಗೂ ಮೊಮ್ಮಗಳನ್ನು ತನ್ನ ಅಳಿಯನಿಂದಲೇ ಅಂತ್ಯವಾಗಿದ್ದಾರೆ ಎಂದು ಬಲವಾಗಿ ವಾದಿಸಿದ್ದರು ಮತ್ತು ದೂರು ನೀಡಿದ್ದರು. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಪ್ರಕರಣ ಸಾಭೀತಾಗಿದೆ.
“ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕುವಲ್ಲಿ ಕೊಂಚ ವಿಳಂಬವಾಗಿದ್ದರಿಂದ ಈ ಘಟನೆ ಜರುಗಿದ ಒಂದು ತಿಂಗಳ ನಂತರ ಆತನನ್ನು ಬಂಧಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಮೊದಮೊದಲು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಆರೋಪಿಯು, ಹಾವು ತಾನಾಗಿಯೇ ಕೋಣೆಯನ್ನು ಪ್ರವೇಶಿಸಿರಬಹುದು ಎಂದು ವಾದಿಸಿದ. ಆದರೆ, ಕೊನೆಗೆ ಅಪರಾಧ ಎಸಗಿರುವುದನ್ನು ಒಪ್ಪಿಕೊಂಡ” ಎಂದು ಪೊಲೀಸರು ತಿಳಿಸಿದ್ದಾರೆ.