ನ್ಯೂಸ್ ನಾಟೌಟ್ : ಉಡುಪಿಯ ನೇಜಾರಿನಲ್ಲಿ ನಡೆದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರವೀಣ್ ಚೌಗಲೆಯ ಮಹಜರು ಪ್ರಕ್ರಿಯೆ ಶೇ.98ರಷ್ಟು ಪೂರ್ಣಗೊಂಡಿದೆ. ಪೊಲೀಸರು ಆತನನ್ನು ನ.28ರ ವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದು,ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಕಾರಣ ಆ ದಿನಾಂಕಕ್ಕೂ ಮುನ್ನ ಆತನನ್ನು ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬಿಜೈನಲ್ಲಿರುವ ಮೃತ ಯುವತಿ ಅಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹಜರು ವೇಳೆ ಕೃತ್ಯಕ್ಕೆ ಬಳಸಿದ್ದ ಚಾಕು, ಮಾಸ್ಕ್, ಬ್ಯಾಗ್ ಸಹಿತ ಇತರ ವಸ್ತುಗಳು ಆತನ ಬಿಜೈಯ ಫ್ಲ್ಯಾಟ್ನಲ್ಲಿ ಈಗಾಗ್ಲೇ ಪತ್ತೆಯಾಗಿವೆ.ಪ್ರವೀಣ್ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್ ಅನ್ನು ಸಹೋದ್ಯೋಗಿ ಅಯ್ನಾಝ್ಗೆ ಬಳಕೆ ಮಾಡಲು ನೀಡಿದ್ದ.ಆದರೆ ಆರೋಪಿ ಆಕೆಗೆ ಸ್ಕೂಟರ್ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದರ ಬಗ್ಗೆ ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ.ಕೊಲೆಗೆ ಮುನ್ನಾ ದಿನ ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು. ಆಕೆಗೆ ಮರುದಿನ ರವಿವಾರ ರಾತ್ರಿ 8ಗಂಟೆಗೆ ದುಬೈ ಹೋಗಲು ಇದ್ದುದರಿಂದ ಮನೆಯಿಂದ ಐಯ್ನಾಝ್ ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದನು ಎಂದು ತಿಳಿದುಬಂದಿದೆ.ಇನ್ನು ಹಂತಕ ಪ್ರವೀಣ್ ತಾನು ಮಾಡಿದ ಕೊಲೆಯ ಯಾವುದೇ ಸುಳಿವು ಸಿಗದಂತೆ ಕೇವಲ ಎರಡು ದಿನದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದ.ಪ್ರವೀಣ್ ಚೌಗುಲೆ ಐನಾಝಳ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ನಲ್ಲಿ ಲೋಕೇಶನ್ ಹಾಕುವ ಮೂಲಕ ನೇಜಾರಿನ ಮನೆ ತಲುಪಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಉಡುಪಿಯ ನೇಜಾರಿನಲ್ಲಿ ಕೊಲೆ ನಡೆಸಿದ ಆರೋಪಿ ಬಳಿಕ ಅನ್ಯರ ಬೈಕ್ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್ ಮಾರ್ಗವಾಗಿ ಹೆಜಮಾಡಿ ಟೋಲ್ಗೇಟ್ ತಲುಪಿರುವ ಅಂಶದ ಬಗ್ಗೆ ವರದಿಯಾಗಿತ್ತು. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದ ಬಳಿ ತೆರಳಿ ಆತ ರಕ್ತಸಿಕ್ತ ಬಟ್ಟೆಯನ್ನು ಅಲ್ಲಿಯೇ ಸುಟ್ಟುಹಾಕಿದ್ದಾನೆ ಎನ್ನುವ ಭಯಾನಕ ಅಂಶ ಇದೀಗ ಹೊರಬಂದಿದೆ.ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ಬಾಯ್ಬಿಟ್ಟು ಹೇಳಿದ್ದಾನೆ.ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.ಇನ್ನೊಂದು ಬೆಚ್ಚಿಬೀಳಿಸುವ ಅಂಶವೆಂದರೆ ಆರೋಪಿ ಪ್ರವೀಣ್ ಕುಸ್ತಿಪಟುವಾಗಿದ್ದ.ಇದು ಆತನಿಗೆ ಕೆಲವೇ ನಿಮಿಷಗಳಲ್ಲಿ ದೈಹಿಕವಾಗಿಯೂ ಸದೃಢನಾಗಿದ್ದ ಈತ ಎದುರಾಳಿಯನ್ನು ಸೋಲಿಸುವುದನ್ನು ಚೆನ್ನಾಗಿಯೇ ತಿಳಿದಿದ್ದ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಚಾಕುವಿನಿಂದ 4 ಮಂದಿಯನ್ನು ಒಬ್ಬನೇ ಕೊಲ್ಲಲು ಸಾಧ್ಯವಾಗಿತ್ತು. ಕೊಲೆ ನಡೆಸಿದ ದಿನ ಮಾದಕದ್ರವ್ಯ ಏನಾದರೂ ಸೇವಿಸಿದ್ದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.ಈಗಾಗಲೇ ಘಟನೆ ನಡೆದ ನೇಜಾರಿನ ಮನೆ, ಸಂತೆಕಟ್ಟೆ, ಕರಾವಳಿ ಬೈಪಾಸ್, ಹೆಜಮಾಡಿ, ಮೂಲ್ಕಿ ಭಾಗ, ಕೆಪಿಟಿ ಬಳಿಯಲ್ಲಿರುವ ಫ್ಲ್ಯಾಟ್, ಮಂಗಳೂರಿನಲ್ಲಿರುವ ಎರಡು ನಿವೇಶನ, ಸುರತ್ಕಲ್ನಲ್ಲಿ ಸ್ವಂತ ಮನೆಯಲ್ಲಿ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ನ.15ರಂದು ಆರೋಪಿಯನ್ನು ಕೋರ್ಟ್ಗೆ ಕರೆತಂದಿದ್ದ ವೇಳೆ 200ಕ್ಕೂ ಅಧಿಕ ಮಂದಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ನಗರದ ಆಯಾ ಕಟ್ಟಿನ ಭಾಗದಲ್ಲಿಯೂ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂದೆಯೂ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.