ನ್ಯೂಸ್ ನಾಟೌಟ್ : ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ತಾಯಿ-ಮಗು ವಿದ್ಯುತ್ ತಂತಿ ತುಳಿದು ದಾರುಣ ಅಂತ್ಯ ಕಂಡಿದ್ದರು.ಈ ಘಟನೆಗೆ ಸಂಬಂಧಿಸಿದಂತೆ 5 ಬೆಸ್ಕಾಂ ಅಧಿಕಾರಿಗಳನ್ನು ಆರೋಪಿಗಳೆಂದು ಬಂಧಿಸಿದ್ದರೂ,ವಿಪರ್ಯಾಸವೆಂದರೆ ಅಂತ್ಯಕ್ರಿಯೆಗೂ ಮುನ್ನವೇ ಆರೋಪಿಗಳು ಜೈಲಿಂದ ಬಿಡುಗಡೆ ಆಗಿದ್ದರು. ಆದರೆ,ಇದೀಗ ತಾಯಿ-ಮಗುವಿನ ಅಂತ್ಯಕ್ಕೆ ಇಲಿಗಳೇ ಕಾರಣವೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಹೇಳಿದ್ದಾರೆ.
ವಿದ್ಯುತ್ ತಂತಿ ತುಳಿದು ದುರಂತ ಅಂತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ವೈಟ್ಫೀಲ್ಡ್ನ ಓಫಾರ್ಮ್ ರಸ್ತೆಯ ಬಳಿಯ ಟ್ರನ್ಸ್ ಫಾರ್ಮರ್ ಒಳಗೆ ಹೆಗ್ಗಣ ನುಗ್ಗಿತ್ತು. ಈ ಹೆಗ್ಗಣವೇ ವೈರ್ ಕಡಿದು ತಂತಿ ತುಂಡಾಗಿ ಬೀಳುವಂತೆ ಮಾಡಿದೆ ಎಂದು ಹೇಳಿದ್ದಾರೆ. ಬೆಳಗ್ಗೆ 3 ಗಂಟೆಯಿಂದ 4.50ರವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಆದರೆ, ಪುನಃ 5 ಗಂಟೆ ಸುಮಾರಿಗೆ ವಿದ್ಯುತ್ ಪ್ರಸರಣಕ್ಕೆ ರಿಚಾರ್ಜ್ ಮಾಡಲಾಗಿದೆ. ಇದೇ ವೇಳೆ ಬಸ್ ಇಳಿದು ಇದೇ ದಾರಿಯಲ್ಲಿ ನಡೆದುಕೊಂಡು ಬಂದ ತಾಯಿ ವಿದ್ಯುತ್ ಪ್ರಸರಣವಿದ್ದ ತಂತಿಯನ್ನು ತುಳಿದಿದ್ದಾಳೆ. ತಾಯಿ- ಜೊತೆಗೆ ಅವರು ಎತ್ತಿಕೊಂಡಿದ್ದ 9 ತಿಂಗಳ ಮಗುವಿಗೂ ಕೂಡ ಕರೆಂಟ್ ಶಾಕ್ ಆಗಿದೆ ಎಂದರು.ತಮ್ಮ ಪಾಡಿಗಿದ್ದ ಕುಟುಂಬ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತಾಯಿ-ಮಗು ಈ ದುರಂತಕ್ಕೆ ಅಂತ್ಯ ಕಂಡಿದ್ದಾರೆ.ತಮಿಳುನಾಡಿಗೆಂದು ತನ್ನ ತಾಯಿ ಮನೆಗೆ ಗಂಡ-ಮಗುವಿನೊಂದಿಗೆ ಹೋಗಿದ್ದಳು.ಶನಿವಾರ ಬಸ್ ಹತ್ತಿಕೊಂಡು ಬೆಂಗಳೂರಿನ ವೈಟ್ಫೀಲ್ಡ್ಗೆ ಬಂದು ಭಾನುವಾರ ಬೆಳ್ಳಂಬೆಳಗ್ಗೆ ಇಳಿದಿದ್ರು.ಮುಂಜಾವಿನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದರು.ಕೂಡಲೇ ಕರೆಂಟ್ ಶಾಕ್ನಿಂದ ಕುಸಿದು ಪುನಃ ತಂತಿ ಮೇಲೆ ಬಿದ್ದ ತಾಯಿ ಹಾಗೂ ಮಗುವಿನ ಜೀವವನ್ನು ವಿದ್ಯುತ್ ತೆಗೆದಿದ್ದಲ್ಲದೇ ಅವರನ್ನು ಸುಟ್ಟು ಕರಕಲಾಗುವಂತೆ ಮಾಡಿತ್ತು. ಆದರೆ ಇದೀಗ ತಾಯಿ-ಮಗುವನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿರುವಾಗ ತಪ್ಪು ಮಾಡಿದ ಬೆಸ್ಕಾಂ ಅಧಿಕಾರಿಗಳು ತಮ್ಮ ಕುಟುಂಬದೊಂದಿಗೆ ನೆಮ್ಮದಿಯಿಂದಿದ್ದಾರೆ.