ನವದೆಹಲಿ: ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರು ಬದಲಿಸಿರುವ ಚೀನಾದ ನಿರ್ಣಯವನ್ನು ಭಾರತವು ಸಾರಾಸಗಟಾಗಿ ತಳ್ಳಿಹಾಕಿದೆ. ಅರುಣಾಚಲ ಪ್ರದೇಶವು ‘ಈಗಲೂ’ ಭಾರತದ ಅವಿಭಾಜ್ಯ ಅಂಗವಾಗಿದೆ. ಮುಂದೆಯೂ ಆಗಿರುತ್ತದೆ. ಬೇರೆ ಹೆಸರುಗಳನ್ನು ಇಡುವುದರಿಂದ ಆ ಸತ್ಯವನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎಂದು ತಿರುಗೇಟು ನೀಡಿದೆ.
ಝಂಗಾಂಗ್ ಅಥವಾ ದಕ್ಷಿಣ ಷಿಝಾಂಗ್ನ (ಟಿಬೆಟ್ ಸ್ವಾಯತ್ತ ಪ್ರದೇಶದ) 15 ಸ್ಥಳಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರು ಇರಿಸಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯಿಸಿದೆ.
ಇಂತಹವುಗಳನ್ನು ನಾವು ನೋಡಿದ್ದೇವೆ. ಚೀನಾ, ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸುವ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2017ರಲ್ಲಿಯೂ ಹೆಸರು ಬದಲಾವಣೆಗೆ ಪ್ರಯತ್ನಿಸಿತ್ತು. ಅರುಣಾಚಲ ಪ್ರದೇಶವು ಈಗಲೂ ಮತ್ತು ಇನ್ನು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ. ರಾಜ್ಯದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವುದರಿಂದ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.