ನ್ಯೂಸ್ ನಾಟೌಟ್ : ಲಿಪ್ಸ್ಟಿಕ್ ವ್ಯಾಮೋಹಕ್ಕೆ ವೈದ್ಯೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಸೈಬರ್ ಖದೀಮರ ತಂತ್ರಕ್ಕೆ ಪ್ರಮುಖ ಇ-ಕಾಮರ್ಸ್ ಪೋರ್ಟಲ್ನಲ್ಲಿ ಮುಂಬಯಿನ ವೈದ್ಯೆಯೊಬ್ಬರು, 300 ರೂಪಾಯಿಯ ಲಿಪ್ಸ್ಟಿಕ್ ಆರ್ಡರ್ ಮಾಡಿ 1 ಲಕ್ಷ ರೂ. ಕಳೆದುಕೊಂಡಿದ್ದು,ಒಂದು ಕ್ಷಣ ಶಾಕ್ಗೊಳಗಾಗುವಂತೆ ಮಾಡಿದೆ.
ನವೆಂಬರ್ 2ರಂದು ನವಿ ಮುಂಬಯಿನ ನಿವಾಸಿಯಾದ ಈ ವೈದ್ಯೆ, ಲಿಪ್ಸ್ಟಿಕ್ಗೆ ಆರ್ಡರ್ ಮಾಡಿದ್ದರು. ಒಂದೆರಡು ದಿನದ ಬಳಿಕ, ”ನಿಮಗೆ ಕೊರಿಯರ್ ತಲುಪಿಸಲಾಗಿದೆ,” ಎನ್ನುವ ಸಂದೇಶವು ವೈದ್ಯೆಯ ಮೊಬೈಲ್ಗೆ ಕೊರಿಯರ್ ಕಂಪನಿಯಿಂದ ತಲುಪಿತು. ಕೂಡಲೇ, ಕೊರಿಯರ್ ಕಂಪನಿಗೆ ಕರೆ ಮಾಡಿದ ವೈದ್ಯೆ, ತಮಗೆ ಪಾರ್ಸೆಲ್ ಬಂದಿಲ್ಲಎಂದಿದ್ದರು. ಆ ಬಳಿಕ, ”ನಿಮ್ಮನ್ನು ಕಸ್ಟಮರ್ಕೇರ್ ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕಿಸುತ್ತಾನೆ. ನಿಮಗೆ ಅವರು ನೆರವಾಗುತ್ತಾರೆ,” ಎಂದು ಕೊರಿಯರ್ ಕಂಪನಿ ತಿಳಿಸಿತ್ತು.ಇದಾದ ಬಳಿಕ ಮಾರನೇ ದಿನ ವೈದ್ಯೆಯ ಮೊಬೈಲ್ಗೆ ಕರೆಯೊಂದು ಬಂತು. ತನ್ನನ್ನು ತಾನು ಕಸ್ಟಮರ್ಕೇರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯು, ”ನಿಮ್ಮ ಆರ್ಡರ್ ಅನ್ನು ತಡೆಹಿಡಿಯಲಾಗಿದೆ. ನಿಮಗೆ ರೀಫಂಡ್ ಮಾಡಲು ಒಂದು ವೆಬ್ಲಿಂಕ್ ಕಳಿಸುತ್ತೇವೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ನೀಡಿರಿ. ನಿಮ್ಮ ಖಾತೆಯ ದೃಢೀಕರಣಕ್ಕಾಗಿ 2 ರೂ.ಪಾವತಿಸಿ,” ಎಂದು ಸೂಚಿಸಿದ.ಇದನ್ನು ನಂಬಿದ್ದ ವೈದ್ಯೆ ತಮ್ಮ ಮೊಬೈಲ್ಗೆ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ಕೂಡಲೇ ಅವರ ಮೊಬೈಲ್ ಸಾಧನದಲ್ಲಿಅಪ್ಲಿಕೇಶನ್ವೊಂದು ಡೌನ್ಲೋಡ್ ಆಯಿತು. ಬಳಿಕ ನವೆಂಬರ್ 9ರಂದು, ವೈದ್ಯೆಯ ಬ್ಯಾಂಕ್ ಖಾತೆಯಿಂದ 1ಲಕ್ಷ ರೂ. ಕಡಿತವಾಯಿತು! ಕಸ್ಟಮರ್ಕೇರ್ ನೆಪದಲ್ಲಿ ವೈದ್ಯೆಯನ್ನೇ ಸೈಬರ್ ಖದೀಮ ಸುಲಭವಾಗಿ ವಂಚಿಸಿ ಪಂಗನಾಮ ಹಾಕಿದ.
ಹಾಗಾದರೆ ವಂಚನೆ ಹೇಗಾಯಿತು ಎಂದು ನೋಡೋದಾದರೆ ವಂಚಕನು ಕಳಿಸಿದ ಲಿಂಕ್ನಲ್ಲಿ ಮೊಬೈಲ್ನಲ್ಲಿ ಮಾಹಿತಿ ಕದಿಯುವ ಅಪ್ಲಿಕೇಷನ್ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ವೈದ್ಯೆಯು 2 ರೂ. ಪಾವತಿಸುವಾಗ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದ್ದರಿಂದ, ಆ ಮಾಹಿತಿಗಳನ್ನು ಸೈಬರ್ ಖದೀಮ ಕದ್ದು, ವೈದ್ಯೆಯ ಖಾತೆಗೆ ಕನ್ನ ಹಾಕಿದ್ದಾನೆ ಎಂದು ಹೇಳಲಾಗಿದೆ.