ನ್ಯೂಸ್ ನಾಟೌಟ್ : ಚುನಾವಣೆ ದಿನ ಹತ್ತಿರ ಬಂತೆಂದರೆ ಸಾಕು ಕಾಂಚಾಣ ಸದ್ದು ಮಾಡುತ್ತಿರುತ್ತದೆ.ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಚುನಾವಣೆ ವೇಳೆ ದುಡ್ಡಿನ ಹೊಳೆಯೇ ಹರಿಯುತ್ತದೆ ಎಂಬುದು ಬಹಿರಂಗ ಸತ್ಯವಾಗಿದೆ. ಇದೀಗ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Assembly Election) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ (Model Code Of Conduct) ಜಾರಿಯಾದ ಬಳಿಕ ಇದುವರೆಗೆ 340 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
“ಮಧ್ಯಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ 40.18 ಕೋಟಿ ರೂ. ನಗದು, 65.56 ಕೋಟಿ ರೂ. ಮೌಲ್ಯದ ಕಳ್ಳಭಟ್ಟಿ ಸಾರಾಯಿ, 17.25 ಕೋಟಿ ರೂ. ಮೌಲ್ಯದ ಮಾದಕವಸ್ತು ಅಥವಾ ಡ್ರಗ್ಸ್, 92.76 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಹಾಗೂ 124 ಕೋಟಿ ರೂ. ಮೌಲ್ಯದ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ” ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಚೆಕ್ಪೋಸ್ಟ್, ಟೋಲ್ಗೇಟ್ ಸೇರಿ ಹಲವೆಡೆ ಅಧಿಕಾರಿಗಳು ಹಣ, ಚಿನ್ನಾಭರಣ ಸೇರಿ ಹಲವು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದ್ದು, ಯಾವ ಪಕ್ಷ ಅಧಿಕಾರದ ಗದ್ದುಗೆಗೆ ಏರಲಿದೆ ಎಂಬ ಕುತೂಹಲ ಕೆರಳಿದೆ. ರಾಜ್ಯದಲ್ಲಿ ಶೇ.76ರಷ್ಟು ಮತದಾನ ದಾಖಲಾಗಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಪ್ರದೇಶದಲ್ಲಿ ಸದ್ಯ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿಯಾಗಿದ್ದಾರೆ.